ಮಾಜಿ ಸಚಿವ ವಿ ಸೋಮಣ್ಣ ಅವರು ತಮ್ಮದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ತೀವ್ರಗೊಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟು ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲೂ, ಸಿದ್ದರಾಮಯ್ಯ ಆಪ್ತ ಪುಟ್ಟರಂಗಶೆಟ್ಟಿ ವಿರುದ್ಧ ಚಾಮರಾಜನಗರದಲ್ಲೂ ದೆಹಲಿ ನಾಯಕರ ಸೂಚನೆಯಂತೆ ಸ್ಪರ್ಧಿಸಿ ಎರಡೂ ಕಡೆಯೂ ಹೀನಾಯವಾಗಿ ಸೋತ ತಮಗೆ ತಮ್ಮ ತ್ಯಾಗಕ್ಕೆ ಬೆಲೆ ಕೊಟ್ಟದಾರೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟು ಚುನಾವಣಾ ಸೋಲಿನಲ್ಲಿ ಕಳೆದುಹೋದ ಗೌರವನ್ನು ವಾಪಸ್ ಪಡೆಯಲು ಪಕ್ಷ ಜೊತೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಡಿಸೆಂಬರ್ ೬ರಂದು ಮುಂದಿನ ನಿರ್ಧಾರದ ಘೋಷಣೆ ಮಾಡಿದ್ದಾರೆ ಸೋಮಣ್ಣ. ನಮ್ಮ ಪಕ್ಷದ್ದು ಸೋಮನಹಳ್ಳಿಯ ಮುದುಕಿ ಕಥೆ ಆಗಿದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬದ ವಿರುದ್ಧ ಗುಡುಗಿದ್ದಾರೆ.
ಸೋಮಣ್ಣ ಉಲ್ಲೇಖಿಸಿದ ಸೋಮನಹಳ್ಳಿಯ ಮುದುಕಿಯ ಕಥೆ ಏನು..? ಬಾಲ್ಯದಲ್ಲಿ ಅಜ್ಜಿ ಕಥೆ ಕೇಳಿದರಿಗೆ ಮುದುಕಿಯೊಬ್ಬಳ ಕೋಳಿ ಕಥೆ ಗೊತ್ತಿರುತ್ತೆ.
ಬೆಳಗಾಗುವುದೇ ನನ್ನ ಕೋಳಿ ಕೂಗಿನಿಂದ, ಸೂರ್ಯ ಹುಟ್ಟುವುದೇ ನನ್ನ ಕೋಳಿ ಕೂಗಿನಿಂದ ಎಂದು ಅಂದುಕೊಂಡಿದ್ದ ಮುದುಕಿಯೊಬ್ಬಳು ಒಂದು ರಾತ್ರಿ ತನ್ನ ಕೋಳಿ ಮತ್ತು ಒಲೆಯನ್ನು ತೆಗೆದುಕೊಂಡು ಸದ್ದಿಲ್ಲದೆ ಹಳ್ಳಿಯನ್ನು ತೊರೆದಳು. ತನ್ನ ಕೋಳಿ ಕೂಗದೇ ಇದ್ದರೂ ಸೂರ್ಯ ಹುಟ್ಟುತ್ತಾನೆ, ಊರಲ್ಲಿರುವ ಮನೆಗಳಲ್ಲಿ ಒಲೆ ಉರಿಯುತ್ತೆ ಎನ್ನುವುದನ್ನು ತಿಳಿದ ಬಳಿಕ ಆಕೆಗೆ ತಮ್ಮ ಸೊಕ್ಕಿನ ಅರಿವಾಯಿತು.
ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದನ್ನು ನೋಡಿದರೆ ಸೋಮಣ್ಣ ಅವರ ಪ್ರಕಾರ ಸೋಮನಹಳ್ಳಿ ಮುದುಕಿ ಎಂದರೆ ಅದು ಯಡಿಯೂರಪ್ಪ ಕುಟುಂಬ.
ಅಂದರೆ ಯಡಿಯೂರಪ್ಪ ಕುಟುಂಬ ಇಲ್ಲದೇ ಹೋದರೆ ಬಿಜೆಪಿ ಉಳಿಯಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ, ಬಿಜೆಪಿಗೆ ಉಳಿಗಾಲ ಇಲ್ಲ, ಬಿಜೆಪಿಯಿಂದ ಲಿಂಗಾಯತರು ದೂರ ಆಗ್ತಾರೆ ಎನ್ನುವಂತೆ ಸೋಮನಹಳ್ಳಿ ಮುದುಕಿಯಂತೆ ಭ್ರಮೆ ಸೃಷ್ಟಿಸಲಾಗಿದೆ.
೨೦೨೧ರ ಜುಲೈಯಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದರ ಮೂಲ ಉದ್ದೇಶ ಇದ್ದಿದ್ದೇ ಯಡಿಯೂರಪ್ಪ ಕುಟುಂಬದ ಕಪಿಮುಷ್ಠಿಯಿಂದ ಬಿಜೆಪಿಯನ್ನು ಹೊರತರಬೇಕು ಎನ್ನುವುದು. ಇದೇ ರಣತಂತ್ರದ ಭಾಗವಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ವಿಜಯೇಂದ್ರ ಅವರನ್ನು ಯಡಿಯೂರಪ್ಪ ಒತ್ತಡದ ಹೊರತಾಗಿಯೂ ವಿಧಾನ ಪರಿಷತ್ ಸದಸ್ಯರನ್ನಾಗಿಯೂ ಮಾಡಲಿಲ್ಲ, ಮಂತ್ರಿಯೂ ಮಾಡಲಿಲ್ಲ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯವರಂತೂ ಪ್ರಬಲ ಸಮುದಾಯದ ಪ್ರಭಾವಳಿಯಿಂದ (ಪರೋಕ್ಷವಾಗಿ ಲಿಂಗಾಯತ) ಪಕ್ಷವನ್ನು ಹೊರತರಬೇಕು ಎನ್ನುವ ವಾದವನ್ನೂ ಮಾಡಿದರು.
ಅದರೆ ವಿಧಾನಸಭಾ ಚುನಾವಣೆಯಲ್ಲಿ ಕೇವಲ ೬೫ ಸೀಟುಗಳನ್ನಷ್ಟೇ (೨೦೨೩ರವರೆಗೆ ಬಿಜೆಪಿ ಹೊಂದಿದ್ದ ವಿಧಾನಸಭಾ ಸೀಟುಗಳ ಅರ್ಧದಷ್ಟು) ಪಡೆದು ಹೀನಾಯವಾಗಿ ಸೋತ ತರುವಾಯ ಈಗ ಯಾರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತೋ ಅವರ ಮಗನನ್ನೇ ಮತ್ತೆ ಬಿಜೆಪಿ ವಿಜೃಂಭಿಸಿದೆ.
ಹಾಗೆ ನೋಡಿದರೆ ವಿಜಯೇಂದ್ರಗಿಂತಲೂ ಹಲವಾರು ಮಂದಿ ದೀರ್ಘಕಾಲದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ, ಮಣ್ಣು ಹೊತ್ತಿದ್ದಾರೆ, ಚಪ್ಪಲಿ ಸವೆಸಿದ್ದಾರೆ. ಅಧಿಕಾರ ಅನುಭವಿಸಿದೆಯೇ ಪಕ್ಷ ಕಟ್ಟಿದ್ದಾರೆ. ತಮ್ಮ ತಂದೆ ದೀರ್ಘಕಾಲದಿಂದ ಪ್ರತಿನಿಧಿಸಿದ್ದ ಶಿಕಾರಿಪುರ ಕ್ಷೇತ್ರದಲ್ಲಿ ಪ್ರಯಾಸದಿಂದ ಗೆದ್ದು ಮೊದಲ ಬಾರಿ ಶಾಸಕರಾಗಿರುವ ವಿಜಯೇಂದ್ರ ರಾಜ್ಯ ಬಿಜೆಪಿಯ ಹಿಡಿತವನ್ನು ಕೊಡಲಾಗಿದೆ.
ರಾಜ್ಯದಲ್ಲಿ ಈಗ ಬಿಜೆಪಿಯ ನಿರ್ಧಾರಗಳು ಜಗನ್ನಾಥ ಭವನ ಅಥವಾ ಕೇಶವಕೃಪದಲ್ಲಿ ಆಗುವ ಬದಲು ಧವಳಗಿರಿಯಲ್ಲಿ ಆಗುತ್ತಿದೆ.
ಕುಟುಂಬ ರಾಜಕಾರಣದ ವಿರುದ್ಧ ಭಾಷಣ ಮಾಡುತ್ತ (ನಮ್ಮ ಪಕ್ಷದ ನಿರ್ಧಾರ ಕಿಚನ್ನಲ್ಲಿ ಅಂದರೆ ಯಡಿಯೂರಪ್ಪ ಅವರ ಅಡುಗೆ ಮನೆಯಲ್ಲಿ ಆಗಲ್ಲ ಎಂದಿದ್ದ ಮಾಜಿ ಸಚಿವ ಸಿ ಟಿ ರವಿ) ತಿರುಗಾಡುತ್ತಿದ್ದ ಬಿಜೆಪಿ ಈಗ ಅದೇ ಯಡಿಯೂರಪ್ಪ ಪುತ್ರನಿಗೆ ಪಕ್ಷವನ್ನು ಬಿಟ್ಟುಕೊಟ್ಟಿದೆ.
ಯಡಿಯೂರಪ್ಪ ಕುಟುಂಬ ಇಲ್ಲದೇ ಬಿಜೆಪಿಯೇ ಇಲ್ಲ ಎನ್ನುವುದು ಸೋಮನಹಳ್ಳಿ ಮುದುಕಿ ಕಥೆ ಎನ್ನುವ ಸೋಮಣ್ಣ ಅವರ ಮಾತಿನ ಕಣ್ಣಿಗೆ ಕಾಣುವ ಪರಿಣಾಮ ಲೋಕಸಭೆಯಲ್ಲಷ್ಟೇ ಗೊತ್ತಾಗಬೇಕಿದೆ.
ADVERTISEMENT
ADVERTISEMENT