ಇವತ್ತಷ್ಟೇ ಮುಖ್ಯಮಂತ್ರಿ ಹುದ್ದೆಯಲ್ಲಿ ಒಂದು ವರ್ಷ ಪೂರೈಸಿರುವ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ನೀಡುವಂತೆ ಬಿಜೆಪಿಯ ದೆಹಲಿ ನಾಯಕರು ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ಬಿಜೆಪಿ ಸರ್ಕಾರದ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಕಾರ್ಯಕರ್ತರು ತಿರುಗಿಬಿದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಈಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಯೋಚನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಸ್ಥಾನದಿಂದ ಬೊಮ್ಮಾಯಿ ಇಳಿಸಲೇಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ಹೈಕಮಾಂಡ್ ಇದೆ ಎಂದು ಮೂಲಗಳು ತಿಳಿಸಿವೆ.
ಇವತ್ತು ದೊಡ್ಡಬಳ್ಳಾಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರು ಸರ್ಕಾರದ ಸಾಧನಾ ಸಮಾವೇಶವನ್ನು ಆಯೋಜಿಸಿದ್ದರು. ಆದರೆ ಬಿಜೆಪಿ ಯುವ ಮುಖಂಡನ ಕೊಲೆಯ ಬಳಿ ಭುಗಿಲೆದ್ದ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ನಿನ್ನೆ ನಡುರಾತ್ರಿ ಸಚಿವ ಡಾ ಕೆ ಸುಧಾಕರ್ ಅವರ ಜೊತೆಗೆ ದಿಡೀರ್ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಜನೋತ್ಸವವನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.
ಚುನಾವಣೆಗೆ ಇನ್ನೆಂಟು ತಿಂಗಳು ಬಾಕಿ ಇರುವಂತೆ ಪಕ್ಷ ಮತ್ತು ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಜನಾಭಿಪ್ರಾಯವನ್ನು ಶಮನ ಮಾಡಲು ಈಗ ನಾಯಕತ್ವ ಬದಲಾವಣೆಯೊಂದೇ ಉಳಿದಿರುವ ಪರಿಹಾರ ಎನ್ನುವುದು ಬಿಜೆಪಿ ಮುಖಂಡರ ಅಭಿಪ್ರಾಯ.
ಈ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಯೋಚನೆ ಮಾಡುತ್ತಿದೆ ಎಂದು ವರದಿ ಆಗಿದೆ.
ADVERTISEMENT
ADVERTISEMENT