ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವ ಸಲುವಾಗಿ ಮಾಡಲಾಗಿರುವ ಜಾತಿ ಗಣತಿ ಸಮೀಕ್ಷೆಯ ಹಸ್ತ ಪ್ರತಿ (ಮೂಲಪ್ರತಿ)ಯೇ ನಾಪತ್ತೆ ಆಗಿರುವುದು ಕೆಲವು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಾಮಾಜಿಕ ಮತ್ತು ಆರ್ಥಿಕ ಬಲವರ್ಧನೆಯ ಭಾಗವಾಗಿ ೨೦೧೫ರಲ್ಲಿ ಆಗಿನ ಸಿದ್ದರಾಮಯ್ಯ ಅವರ ಸರ್ಕಾರ ಜಾತಿ ಗಣತಿಗೆ ಆದೇಶ ಹೊರಡಿಸಿತು.
೨೦೧೫ರಲ್ಲಿ ಕೈಗೊಳ್ಳಲಾದ ಜಾತಿ ಗಣತಿ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಕಾರ್ಯಾವಧಿ ಇದೇ ನವೆಂಬರ್ ೨೬ರಂದು ಅಂತ್ಯವಾಗಲಿದೆ.
ಜಾತಿ ಗಣತಿ ವರದಿ ತಯಾರಿಕೆಗೆ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಈಗಿರುವ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸುವಂತೆ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ವರದಿ ನೀಡುವವರೆಗೆ ಆಯೋಗದ ಅವಧಿ ವಿಸ್ತರಣೆಗೆ ನಿರ್ಧರಿಸಲಾಗಿದೆ ಎಂದು ಸಿಎಂ ಅವರೂ ಹೇಳಿದ್ದಾರೆ.
ಆದರೆ ಜಾತಿ ಸಮೀಕ್ಷೆ ಕುರಿತ ವರದಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿರುವ ಹೊತ್ತಲ್ಲೇ ಕೆಲವು ಪ್ರಮುಖ ಪ್ರಶ್ನೆಗಳು ಕೇಳಲೇ ಬೇಕಿದೆ.
ಒಟ್ಟು ಸರ್ಕಾರಿ ವ್ಯವಸ್ಥೆ ನಡೆಯುತ್ತಿರುವ ರೀತಿ, ಸರ್ಕಾರದಲ್ಲಿ ಆಡಳಿತಾತ್ಮಕ ಗೌಪ್ಯತೆ ಕಾಪಾಡಬೇಕಾದ ಹಿನ್ನೆಲೆಯಲ್ಲಿ ನಾವು ಈ ಪ್ರಶ್ನೆಗಳು ಕೇಳಬೇಕು.
೨೦೨೧ರ ಆಗಸ್ಟ್ ೨೬ರಂದು ಆಗಲೂ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಮತ್ತು ಆಯೋಗದ ಸದಸ್ಯ ಕಾರ್ಯದರ್ಶಿ ಕೆ ಎ ದಯಾನಂದ ಅವರು ಕಾಂತರಾಜು ಆಯೋಗ ಸಿದ್ಧಪಡಿಸಿದ್ದ ವರದಿಯನ್ನು ಇಡಲಾಗಿದ್ದ ಮುಚ್ಚಿದ ಪೆಟ್ಟಿಗೆಗಳನ್ನು ತೆರೆದಾಗ ಅಂಕಿಅಂಶಗಳನ್ನು ಒಳಗೊಂಡ ಮುದ್ರಿತ ಪುಸ್ತಕಗಳು ಮತ್ತು ಮುಖ್ಯ ವರದಿಯ ಮುದ್ರಿತ ಪ್ರತಿ ಹಾಗೂ ಎರಡು ಸಿಡಿಗಳು ಇದ್ದವು.
ಆದರೆ ಒಂದೂವರೆ ತಿಂಗಳ ಬಳಿಕ ಅಂದರೆ ಅಕ್ಟೋಬರ್ ೫ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಮುಚ್ಚಿದ ಪೆಟ್ಟಿಗೆಯಲ್ಲಿ ಲಭ್ಯ ಇಲ್ಲ.
ಅಲ್ಲದೇ ಮುದ್ರಿತ ಮುಖ್ಯ ವರದಿಯ ಪ್ರತಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿಯೂ ಇಲ್ಲ. ಹೀಗಾಗಿ ಹಸ್ತಪ್ರತಿಯನ್ನು ತಕ್ಷಣ ಆಯೋಗದ ಕಚೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲು ಸೂಚಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟನೆ ಕೋರಿದ್ದರು.
ಇದಾದ ಬಳಿಕ ಮರು ವರ್ಷ ಅಂದರೆ ೨೦೨೨ರ ಮಾರ್ಚ್ ೫ರಂದು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿರುವ ಕೆ ಎ ದಯಾನಂದ್ ಅವರು ಆಯೋಗ ಈ ಹಿಂದಿನ ಸದಸ್ಯ ಕಾರ್ಯದರ್ಶಿ ಎನ್ ವಿ ಪ್ರಸಾದ್ ಅವರಿಗೆ ಪತ್ರವನ್ನು ಬರೆಯುತ್ತಾರೆ.
ಮುಖ್ಯ ವರದಿಯ ಮೂಲ ಹಸ್ತಪ್ರತಿ ಕಚೇರಿಯಲ್ಲಿ ಲಭ್ಯ ಇಲ್ಲ. ವರದಿಯ ಝೆರಾಕ್ಸ್ ಪ್ರತಿಯ ಕುರಿತು ಯಾವುದೇ ಪತ್ರ ವ್ಯವಹಾರವಾಗಿಲ್ಲ. ಹೀಗಾಗಿ ಈ ಬಗ್ಗೆ ಹೆಚ್ಚಿನ ವಿವರಗಳ ಸಹಿತ ತಮ್ಮ ಅಭಿಪ್ರಾಯವನ್ನು ಆಯೋಗಕ್ಕೆ ನೀಡಬೇಕು ಎಂದು ಪತ್ರದಲ್ಲಿ ಬರೆಯುತ್ತಾರೆ.
ಯತ್ನಾಳ್ ಟ್ವೀಟ್:
ಹಸ್ತಪ್ರತಿ ಅಥವಾ ವರ್ಕ್ಶೀಟ್ ನಾಪತ್ತೆ ವರದಿ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
2015 ರಲ್ಲಿ ಕರ್ನಾಟಕ ಸರ್ಕಾರ 180 ಕೋಟಿ ಖರ್ಚು ಮಾಡಿ ಮಾಡಿದ ಸಮೀಕ್ಷೆಯ ಮೂಲ ಪ್ರತಿಯೇ ಕಳೆದುಹೋಗಿರುವುದು ಹಾಗು ಲಭ್ಯವಿರುವ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದೆ ಇರುವುದು ಆಯೋಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹಿಂದುಳಿದ ವರ್ಗಗಳ ಆಯೋಗ ಹಿಂದಿನ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯವರಿಗೆ ನೋಟಿಸ್ ನೀಡಿ ನಂತರ ರಾಜಕೀಯ ಒತ್ತಡಕ್ಕೆ ಮಣಿದು ತನಿಖೆಯನ್ನೇ ಅರ್ಧಕ್ಕೆ ಕೈಬಿಟ್ಟಿರುವುದು ಆಶ್ಚರ್ಯದ ಸಂಗತಿ.
ಈ ಕೂಡಲೇ ವರದಿ ನೈಜತೆಯ ಬಗ್ಗೆ ತನಿಖೆ ಮಾಡಬೇಕು ಹಾಗು ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು
ಎಂದು ಯತ್ನಾಳ್ ಕಿಡಿಕಾರಿ ಆಗ್ರಹಿಸಿದ್ದಾರೆ.
೧೬೮ ಕೋಟಿ ರೂಪಾಯಿ ವೆಚ್ಚದೊಂದಿಗೆ ಮಾಡಲಾದ ಅತ್ಯಂತ ಮಹತ್ವಪೂರ್ಣ ಜಾತಿ ಗಣತಿ ವರದಿ ಹಿನ್ನೆಲೆಯಲ್ಲಿ ಕೇಳಬೇಕಿರುವ ಪ್ರಶ್ನೆಗಳು:
ಪ್ರಶ್ನೆ ೧:
ಜಾತಿ ಸಮೀಕ್ಷೆಯ ಹಸ್ತ ಪ್ರತಿ ಅಥವಾ ಮೂಲ ಪ್ರತಿ ನಾಪತ್ತೆಯಾಗಿದ್ದು ಅಥವಾ ಕಳುವಾಗಿದ್ದು ಯಾರ ಅವಧಿಯಲ್ಲಿ..? ೨೦೧೮ಕ್ಕೋ ಮೊದಲೋ, ೨೦೧೯ಕ್ಕೂ ಮೊದಲೋ ಅಥವಾ ೨೦೧೯ರ ನಂತರವೋ..?
ಪ್ರಶ್ನೆ ೨:
ಸರ್ಕಾರದ ದಾಖಲೆಯಾಗಿರುವ ಸಮೀಕ್ಷಾ ವರದಿ ಸರ್ಕಾರ ಬಳಿಯಿಂದಲೇ ನಾಪತ್ತೆ ಆಗಲು ಹೇಗೆ ಸಾಧ್ಯ..? ಈ ಕೃತ್ಯ ನಡೆಸಿದವರು ಯಾರು..?
ಪ್ರಶ್ನೆ ೩:
ಮೂಲ ಪ್ರತಿ ಅಥವಾ ಹಸ್ತ ಪ್ರತಿ ನಾಪತ್ತೆಯಾಗಿದೆ ಎಂದು ೨೦೨೧ರಲ್ಲೇ ಆಯೋಗದ ಅಧ್ಯಕ್ಷರೇ ಖುದ್ದು ಪತ್ರ ಬರೆದರೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆ ಬಗ್ಗೆ ಯಾಕೆ ತನಿಖೆಗೆ ಆದೇಶ ನೀಡಲಿಲ್ಲ..?
ಪ್ರಶ್ನೆ ೪:
ರಾಜ್ಯ ಸರ್ಕಾರದ ಬಳಿಯೇ ಇರಬೇಕಿದ್ದ ಮೂಲ ಪ್ರತಿ ಅಥವಾ ಹಸ್ತ ಪ್ರತಿ ನಾಪತ್ತೆಯಾಗಿದ್ದರೂ ಯಾಕೆ ಆ ಬಗ್ಗೆ ಯಾಕೆ ಸರ್ಕಾರ ಪ್ರಕರಣ ದಾಖಲಿಸಲಿಲ್ಲ..?
ಪ್ರಶ್ನೆ ೫:
ಜಾತಿ ಸಮೀಕ್ಷಾ ಮೂಲ ಪ್ರತಿ ನಾಪತ್ತೆಯಾಗಿದೆ ಎಂಬ ಮಾಹಿತಿ ಇದ್ದರೂ ಆಗಿನ ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಕ್ರಮಕೈಗೊಳ್ಳದೇ ಸುಮ್ಮನಿದ್ದಿದ್ದು ಯಾಕೆ..?
ಪ್ರಶ್ನೆ ೬:
ಮೂಲ ಪ್ರತಿ ನಾಪತ್ತೆಯಾಗಿದ್ದರ ಬಗ್ಗೆ ಬಗ್ಗೆ ಮಾಹಿತಿ ಕೇಳಿದ್ದರೂ ಪ್ರತಿಕ್ರಿಯೆ ನೀಡದ ಐಎಎಸ್ ಅಧಿಕಾರಿ ಎನ್ ವಿ ಪ್ರಸಾದ್ ವಿರುದ್ಧ ಆಗಿನ ಬಿಜೆಪಿ ಸರ್ಕಾರ ಕ್ರಮಕೈಗೊಳ್ಳದೇ ಸಾರಿಗೆ ಇಲಾಖೆ ಕಾರ್ಯದರ್ಶಿಯಂತ ಪ್ರಮುಖ ಹುದ್ದೆಯನ್ನೇ ಕೊಟ್ಟು ರಕ್ಷಣೆ ಮಾಡಿದ್ದು ಯಾಕೆ..?
ಪ್ರಶ್ನೆ ೭:
ಸಾಮಾಜಿಕ ಮತ್ತು ಆರ್ಥಿಕ ಬಲವರ್ಧನೆಯ ಹಿನ್ನೆಲೆಯಲ್ಲಿ ನಡೆಸಲಾದ ಜಾತಿ ಸಮೀಕ್ಷ ವರದಿ ಜಾರಿಗೆ ಕೇವಲ ಐಎಎಸ್ ಅಧಿಕಾರಿಯೊಬ್ಬರು ಅಡ್ಡಗಾಲುವಷ್ಟರ ಮಟ್ಟಿಗೆ ಬಿಜೆಪಿ ಸರ್ಕಾರ ದುರ್ಬಲವಾಗಿತ್ತೇ..?
ಪ್ರಶ್ನೆ ೮:
ಸರ್ಕಾರದ ಕಡತಗಳೇ ಸರ್ಕಾರದಿಂದ ಕಾಣೆಯಾಗಿವೆ ಎನ್ನುವುದಾರೆ ಬಿಜೆಪಿ ಸರ್ಕಾರ ಎಷ್ಟರ ಮಟ್ಟಿಗೆ ಬಿಗಿಯಾಗಿತ್ತು..?
ADVERTISEMENT
ADVERTISEMENT