BIG EXCLUSIVE: ಮುನಿಯಾಲ್​ ಉದಯ್​ ಕುಮಾರ್​ ಶೆಟ್ಟಿಗೆ ಸಿಗಲ್ವಾ ಕಾಂಗ್ರೆಸ್​ ಟಿಕೆಟ್​..? 11 ಕಾರಣಗಳೇ ಮುಳುವಾಗುತ್ತಾ..?

ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಮುನಿಯಾಲ್​ ಉದಯ್​ ಕುಮಾರ್​ ಶೆಟ್ಟಿ ಅವರಿಗೆ ಟಿಕೆಟ್​ ಸಿಗಬಹುದು ಎಂಬ ಬಗ್ಗೆ ಕೆಲ ದಿನಗಳ ಹಿಂದೆ ಪ್ರತಿಕ್ಷಣ ವರದಿ ಮಾಡಿತ್ತು. ಆದರೆ ಮುನಿಯಾಲ್​ ಅವರಿಗೆ ಈ ಬಾರಿ ಟಿಕೆಟ್​ ಸಿಗದೇ ಇದ್ದರೂ ಅಚ್ಚರಿಯೇನಿಲ್ಲ.

ಮೂಲಗಳ ಪ್ರಕಾರ ಮುನಿಯಾಲ್​ ಅವರ ವಿಷಯದಲ್ಲಿ ಕಾಂಗ್ರೆಸ್​​ಗೆ ಹಲವು ಆತಂಕಗಳು ಮತ್ತು ಮುನಿಯಾಲ್​ ಅವರಿಗೆ ಟಿಕೆಟ್​ ಕೊಟ್ಟರೆ ಬಿಜೆಪಿ ಶಾಸಕ ಸುನಿಲ್​ ಕುಮಾರ್ ಅಥವಾ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಅವರಿಗೆ ಲಾಭ ಆಗಬಹುದು ಎಂಬ ಆತಂಕ ಕಾಂಗ್ರೆಸ್​​ನ್ನು ಕಾಡುತ್ತಿದೆ.

1. ಮೂರು ಬಾರಿ ಅವಕಾಶ, ಮೂರು ಬಾರಿಯೂ ಸಮಯ ಕೇಳಿದ ಮುನಿಯಾಲ್​:

ಒಂದೂವರೆ ವರ್ಷದ ಹಿಂದೆಯೇ ಕಾರ್ಕಳದಲ್ಲಿ ಕಾಂಗ್ರೆಸ್​ ಈ ಬಾರಿ ಮುನಿಯಾಲ್​ ಉದಯ್​ ಕುಮಾರ್​ ಶೆಟ್ಟಿ ಅವರಿಗೆ ಟಿಕೆಟ್​ ಕೊಡುವ ಬಗ್ಗೆ ಯೋಚನೆ ಮಾಡಿತ್ತು. ಈ ಬಗ್ಗೆ ಖುದ್ದು ಮುನಿಯಾಲ್​ ಅವರ ಬಳಿಯೇ ಕಾಂಗ್ರೆಸ್​ ನಾಯಕರು ಚರ್ಚೆಯನ್ನೂ ನಡೆಸಿದ್ದರು.

ಆದರೆ ಆಗ ಮುನಿಯಾಲ್​ ತಮಗೆ ಆರು ತಿಂಗಳು ಸಮಯ ನೀಡುವಂತೆ, ಆರು ತಿಂಗಳಲ್ಲಿ ತಮ್ಮ ರಾಜಕೀಯ ನಿರ್ಧಾರ ತಿಳಿಸುವುದಾಗಿ ಕಾಂಗ್ರೆಸ್​ ನಾಯಕರ ಬಳಿ ಸಮಯ ಕೇಳಿದ್ದರು.

ಇದಾದ ಬಳಿಕ ಮೂರು ತಿಂಗಳ ಹಿಂದೆ ಮತ್ತೆ ಉದಯ್​ ಕುಮಾರ್​ ಶೆಟ್ಟಿ ಅವರನ್ನು ಕಾಂಗ್ರೆಸ್​ ಸಂಪರ್ಕಿಸಿತ್ತು. ಆದರೆ ಆಗಲೂ ಸಮಯವಾಕಾಶ ಕೇಳಿದ್ದರು.

ಇತ್ತ, ಕಾಂಗ್ರೆಸ್​ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಮುನಿಯಾಲ್​ ಅವರಿಗೆ ಕ್ಷೇತ್ರದಲ್ಲಿ ಕೆಲವು ಪೂರಕ ಅಂಶಗಳಿವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಬೆಂಗಳೂರಲ್ಲಿ ನಡೆದಿದ್ದ ಕಾಂಗ್ರೆಸ್​​ನ ಹಿರಿಯ ನಾಯಕರ ಸಭೆಯ ಬಳಿಕ ಮತ್ತೆ ಕಾಂಗ್ರೆಸ್​ ಮುನಿಯಾಲ್​ ಅವರನ್ನು ಸಂಪರ್ಕ ಮಾಡಿತ್ತು.

ಆದರೆ ಮೂರನೇ ಬಾರಿಯೂ ಮತ್ತೆ ಸ್ಪರ್ಧೆಯ ಬಗ್ಗೆ ನಿರ್ಧರಿಸಲು ಸಮಯ ನೀಡುವಂತೆ ಮುನಿಯಾಲ್​ ಕಾಂಗ್ರೆಸ್​ ನಾಯಕರಿಗೆ ಹೇಳಿದರು. ಆ ಮೂರನೇ ಮಾತುಕತೆ ನಡೆದು ಹಲವು ದಿನಗಳಾದರೂ ಇನ್ನೂ ಮುನಿಯಾಲ್​ ಅವರ ಕಡೆಯಿಂದ ಕಾಂಗ್ರೆಸ್​ ನಾಯಕರಿಗೆ ಸಂದೇಶ ರವಾನೆ ಆಗಿಲ್ಲ.

ಪದೇ ಪದೇ ಸಂಪರ್ಕಿಸಿದರೂ ಮುನಿಯಾಲ್​ ಉದಯ್​ ಕುಮಾರ್​ ಶೆಟ್ಟಿ ಸಮಯ ದೂಡುವ ನಿರ್ಧಾರದಿಂದ ಇವರಿಗೆ ಟಿಕೆಟ್​ ಕೊಡಬೇಕೇ ಬೇಡವೇ ಎಂಬ ಬಗ್ಗೆ ಪ್ರಶ್ನೆಗಳು ಕಾಂಗ್ರೆಸ್​ ನಾಯಕರನ್ನು ಕಾಡುತ್ತಿವೆ.

2. ಕಾಂಗ್ರೆಸ್​ ಪಕ್ಷದ ಕಡೆ ತಲೆ ಹಾಕದ ಮುನಿಯಾಲ್​:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ಕೈ ತಪ್ಪಿದ ಬಳಿಕ ಉಡುಪಿ ಕಾಂಗ್ರೆಸ್​ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಮುನಿಯಾಲ್​ ಅವರು ಕಾರ್ಕಳದಲ್ಲಿ ಕಾಂಗ್ರೆಸ್​ ಸಂಘಟನೆಯಲ್ಲೇ ತೊಡಗಿಸಿಕೊಂಡಿಲ್ಲ. ಪಕ್ಷದ ಸಭೆ, ಸಮಾರಂಭ, ಸಮಾವೇಶಗಳಿಂದ ಐದು ವರ್ಷಗಳಿಂದ ಮುನಿಯಾಲ್​ ಅವರು ಸಂಪೂರ್ಣ ದೂರ ಉಳಿದಿದ್ದಾರೆ. 

ಹೀಗಾಗಿ ಮುನಿಯಾಲ್​ ಅವರು ಇನ್ನೂ ಕಾಂಗ್ರೆಸ್​ನಲ್ಲಿದ್ದಾರೋ ಅಥವಾ ಪಕ್ಷ ಬಿಟ್ಟಿದ್ದಾರೋ ಎನ್ನುವುದೇ ಕಾರ್ಕಳದಲ್ಲಿ ಗೊಂದಲ. 

3. ಬಿಜೆಪಿ ಸೇರಿದ ಮುನಿಯಾಲ್​ ಬೆಂಬಲಿಗರು:

ಮುನಿಯಾಲ್​ ಜೊತೆಗೆ ಗುರುತಿಸಿಕೊಂಡಿದ್ದ ಬೆಂಬಲಿಗರು ಕಳೆದ ವಿಧಾನಸಭಾ ಚುನಾವಣೆ ಬಳಿಕ ಒಬ್ಬೊಬ್ಬರಾಗಿಯೇ ಬಿಜೆಪಿ ಸೇರಿಕೊಂಡರು.

4. ಬಿಜೆಪಿಗೆ ಸೇರಲು ಪ್ರಯತ್ನಿಸಿದ್ದ ಮುನಿಯಾಲ್​:

ಉಡುಪಿ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಅವರು ಬಿಜೆಪಿ ಸೇರಿದ ಬಳಿಕ ಮುನಿಯಾಲ್​ ಅವರು ಕೂಡಾ ಬಿಜೆಪಿ ಸೇರುವ ಬಗ್ಗೆ ಪ್ರಯತ್ನಿಸಿದ್ದರು. ಇದರ ಸಲುವಾಗಿಯೇ ಕಾರ್ಕಳದ ಹಲವು ಭಾಗಗಳಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಮತ್ತು ನಾಯಕರ ಜೊತೆಗೆ ಸಭೆ ಕರೆದಿದ್ದರೂ ಆ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇತ್ತ ಆ ಸಭೆಗಳಲ್ಲಿ ಭಾಗವಹಿಸಿದ್ದ ಮುನಿಯಾಲ್​ ಅವರ ಕೆಲ ಹಿತೈಷಿ ಕಾಂಗ್ರೆಸ್​ ಕಾರ್ಯಕರ್ತರು ಬಿಜೆಪಿ ಸೇರುವ ನಿರ್ಧಾರಕ್ಕೆ ಬೆಂಬಲ ಸೂಚಿಸಲಿಲ್ಲ.

ಹೀಗಾಗಿ ಕೊನೆಗೆ ಅನಿವಾರ್ಯವಾಗಿ ಮುನಿಯಾಲ್​ ಬಿಜೆಪಿ ಸೇರುವ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು.

5. ಸಚಿವ ಸುನಿಲ್​ ಕುಮಾರ್​ ಜೊತೆಗೆ ಆತ್ಮೀಯತೆ:

ಮುನಿಯಾಲ್​ ಅವರ ವಿರುದ್ಧ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿಸಿದ್ದೇ ಸಚಿವ ಸುನಿಲ್​ ಕುಮಾರ್​ ಎಂಬ ಆರೋಪ ಇದೆ.

ತಮ್ಮ ರಾಜಕೀಯ ಎದುರಾಳಿ ಪಕ್ಷದ ಪ್ರಭಾವಿ ಸಚಿವರೊಬ್ಬರು ತಮ್ಮನ್ನು ರಾಜಕೀಯವಾಗಿ ಮುಗಿಸಲು ದಾಳಿ ಮಾಡಿದರು ಎಂಬ ಆರೋಪದ ನಡುವೆಯೂ ಈ ದಾಳಿಯ ಬಳಿಕ ಮುನಿಯಾಲ್​ ಅವರು ಕಾಂಗ್ರೆಸ್​​ಗಿಂತಲೂ ಸಚಿವ ಸುನಿಲ್​ ಕುಮಾರ್​ ಅವರ ಜೊತೆಗೆ ಆತ್ಮೀಯತೆ ಹೆಚ್ಚಿಸಿಕೊಂಡಿದ್ದು ಕಾರ್ಕಳದಲ್ಲಿ ಅಚ್ಚರಿ ಮೂಡಿಸಿತ್ತು.

ಬಿಜೆಪಿ ಸರ್ಕಾರದ ವಿರುದ್ಧ ಶೇಕಡಾ 40ರಷ್ಟು ಕಮಿಷನ್​ ಆರೋಪ ಬಂದಾಗ ಸುದ್ದಿಗೋಷ್ಠಿ ನಡೆಸಿದ್ದ ಮುನಿಯಾಲ್​ ಅವರು ಉಡುಪಿ ಜಿಲ್ಲೆಯಲ್ಲಿ ಅಂಥದ್ದೇನು ಇಲ್ಲ ಎನ್ನುವ ಮೂಲಕ ಬಿಜೆಪಿ ಸರ್ಕಾರದ ಪರವಾಗಿ ವಕಾಲತ್ತು ವಹಿಸಿದ್ದರು.

6. ಉದ್ಯಮದ ಕಾರಣದಿಂದ ಮುನಿಯಾಲ್​ ಹಿಂಜರಿಕೆ:

ಸಚಿವ ಸುನಿಲ್​ ಕುಮಾರ್​ ಅಥವಾ ಕ್ಷೇತ್ರದಲ್ಲಿ ಬಿಜೆಪಿಯ ವಿರುದ್ಧ ಪ್ರಬಲ ಸ್ಪರ್ಧೆ ಕೊಡುವುದಕ್ಕೆ ಸದ್ಯದ ಸನ್ನಿವೇಶದಲ್ಲಿ ಮುನಿಯಾಲ್​ ಅವರು ಸಿದ್ಧರಿಲ್ಲ. ಒಂದು ವೇಳೆ ಬಿಜೆಪಿಯನ್ನು ಎದುರು ಹಾಕಿಕೊಂಡರೆ ಗುತ್ತಿಗೆದಾರರಾಗಿರುವ ತಮ್ಮ ಉದ್ಯಮಕ್ಕೆ ಹಿನ್ನಡೆ ಆಗಬಹುದು ಎಂಬ ಆತಂಕ ಮುನಿಯಾಲ್​ ಅವರದ್ದು.

7. ಬಿಜೆಪಿ ಶಾಸಕರ ಆಪ್ತ ಉದ್ಯಮಿಯ ಜೊತೆಗೆ ನಂಟು:

ಇತ್ತ ದಕ್ಷಿಣ ಕನ್ನಡದ ಪ್ರಭಾವಿ ಬಿಜೆಪಿ ಶಾಸಕರೊಬ್ಬರ ಆಪ್ತ ಉದ್ಯಮಿಗೂ ಮುನಿಯಾಲ್​ ಅವರಿಗೂ ನಿರಂತರ ಸಂಪರ್ಕ ಕಾರಣ ಮುನಿಯಾಲ್​ ಅವರ ರಾಜಕೀಯ ನಡೆಗಳು ಅನುಮಾನಕ್ಕೆ ಕಾರಣವಾಗಿದೆ.

8. ಕೊನೆ ಕ್ಷಣದಲ್ಲಿ ಕೈ ಕೊಟ್ಟರೆಂಬ ಆತಂಕ:

ಮುನಿಯಾಲ್​ ಅವರಿಗೆ ಕಾಂಗ್ರೆಸ್​ ಟಿಕೆಟ್​ನ ಆಫರ್​ ಕೊಟ್ಟಿರುವುದು ನಿಜ. ಆದರೆ ಕಾಂಗ್ರೆಸ್​​ಗೆ​ ಕಾಡ್ತಿರುವ ದೊಡ್ಡ ಆತಂಕ ಕೊನೆ ಕ್ಷಣದಲ್ಲಿ ಚುನಾವಣೆಯಲ್ಲಿ ಮುನಿಯಾಲ್​ ಸುನಿಲ್​ ಕುಮಾರ್​ ಅವರ ನಿಂತರೆ ಕಥೆ ಏನು ಎನ್ನುವುದು. ಕಾರ್ಕಳ ಕಾಂಗ್ರೆಸ್​ನಲ್ಲಿ ಕಾರ್ಯಕರ್ತರು ಮತ್ತು ನಾಯಕರು ಇದೇ ಮಾತುಗಳನ್ನಾಡುತ್ತಿದ್ದಾರೆ.

9. ರಾಜಕೀಯ ನಿಷ್ಠೆಯ ಕೊರತೆ:

ರಾಜಕೀಯ ಆಕಾಂಕ್ಷೆಯನ್ನು ಹೊಂದಿರುವ ಮುನಿಯಾಲ್​ ಅವರಿಗೆ ರಾಜಕಾರಣಿಗೆ ಇರಬೇಕಾದ ದೀರ್ಘಕಾಲದ ರಾಜಕೀಯ ನಿಷ್ಠೆ ಮತ್ತು ಸ್ಪಷ್ಟತೆ ಇಲ್ಲದೇ ಇರುವುದು ಅವರ ಹಿನ್ನಡೆಗೆ ಕಾರಣವಾಗಬಹುದು. 

ಕಳೆದ ಬಾರಿ ಟಿಕೆಟ್​ ಕೈ ತಪ್ಪಿದಾಗ ಬಹಿರಂಗವಾಗಿಯೇ ಅಸಮಾಧಾನಗೊಂಡು ಪ್ರತಿಭಟಿಸಿದ್ದ ಮುನಿಯಾಲ್​ ಆ ಬಳಿಕ ಕಾರ್ಕಳದಲ್ಲಿ ಕಾಂಗ್ರೆಸ್​ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿಲ್ಲ ಮತ್ತು ಬಿಜೆಪಿ ಸೇರುವ ಪ್ರಯತ್ನವನ್ನೂ ಮಾಡಿದ್ದರು. ಕರೆದು ಟಿಕೆಟ್​ ಕೊಡುತ್ತಾರೆ ಎಂಬ ಭಾವನೆ ಮುನಿಯಾಲ್​ ಅವರಿಗೆ ರಾಜಕೀಯ ನಿಷ್ಠೆ ಮತ್ತು ಬದ್ಧತೆಯ ಕೊರತೆಯನ್ನು ಬಿಂಬಿಸುತ್ತಿದೆ ಎನ್ನುವುದು ಕಾರ್ಕಳ ಕಾಂಗ್ರೆಸ್​ ಕಾರ್ಯಕರ್ತರ ಅಭಿಪ್ರಾಯ.

10. ಕಾಂಗ್ರೆಸ್​ ನಾಯಕ ಎಂದು ಗುರುತಿಸಿಕೊಳ್ಳಲೂ ಹಿಂದೇಟು:

ಐದು ವರ್ಷಗಳಲ್ಲಿ ಮುನಿಯಾಲ್​ ಅವರು ತಾವು ಹೊರಡಿಸಿರುವ ಪೋಸ್ಟರ್​ಗಳಲ್ಲಿ ಎಲ್ಲೂ ಕೂಡಾ ತಾವು ಕಾಂಗ್ರೆಸ್​ ಮುಖಂಡರೆಂದಾಗಲೀ, ಕಾಂಗ್ರೆಸ್​ ಪದಾಧಿಕಾರಿ ಎಂದಾಗಲೀ ಗುರುತಿಸಿಕೊಂಡಿಲ್ಲ. 

11. ಕಾಂಗ್ರೆಸ್​ ಮತಗಳೇ ದೂರ ಆಗಬಹುದು ಆತಂಕ:

ಮುನಿಯಾಲ್​ ಅವರಿಗೆ ಟಿಕೆಟ್​ ಕೊಟ್ಟರೆ  ಕಾಂಗ್ರೆಸ್​ನ ನಿಷ್ಠ ಮತಗಳೂ ಕಾಂಗ್ರೆಸ್​ನಿಂದ ದೂರವಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಅವರ ಪಾಲಾಗಬಹುದು ಎನ್ನುವ ಆತಂಕವೂ ಕಾಂಗ್ರೆಸ್​ನ್ನು ಕಾಡುತ್ತಿದೆ.

ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ:

ಕಾಂಗ್ರೆಸ್​ನಿಂದಲೇ ದೂರ ಇರುವ ಮುನಿಯಾಲ್​ ಅವರು ಕಳೆದ ಬಾರಿಯಂತೆ ಈ ಬಾರಿಯೂ ಅನುಕಂಪಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಕಾರ್ಕಳ ಕಾಂಗ್ರೆಸ್ಸಿಗರ ಮಾತು. 

ಒಂದು ವೇಳೆ ಕಾಂಗ್ರೆಸ್​ ಟಿಕೆಟ್​ ಬೇಕಾಗಿದ್ದಲ್ಲಿ ಕಾಂಗ್ರೆಸ್​ ಮೂರು ಬಾರಿ ಕೇಳಿರುವಾಗ ಇಷ್ಟೊತ್ತಿಗೆ ಮುನಿಯಾಲ್​ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಆದರೆ ಇದುವರೆಗೆ ಮುನಿಯಾಲ್​ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ.

ಆದರೆ ಈ ಬಾರಿಯೂ ಟಿಕೆಟ್​ ಕೈ ತಪ್ಪಿದರೆ ಕಾಂಗ್ರೆಸ್​ನಿಂದಲೇ ಎಂಬ ಅನುಕಂಪ ಸೃಷ್ಟಿಸುವ ಪ್ರಯತ್ನವನ್ನು ಮುನಿಯಾಲ್​ ಅವರು ಮಾಡುತ್ತಿದ್ದಾರೆ ಎಂಬುದು ಕಾರ್ಕಳ ಕಾಂಗ್ರಸ್ಸಿಗರ ಮಾತು.