ಇಳಿ ವಯಸ್ಸಲ್ಲಿ ಯಡಿಯೂರಪ್ಪಗೆ ಆಘಾತ, ವಿಜಯೇಂದ್ರಗೆ ದೊಡ್ಡ ರಾಜಕೀಯ ಹಿನ್ನಡೆ, ಲೋಕಾಯಕ್ತಕ್ಕೆ ಅಸಲಿ ಅಗ್ನಿಪರೀಕ್ಷೆ..!

B S Yadiyurappa and B Y Vijayednra
B S Yadiyurappa and B Y Vijayednra
ಅಕ್ಷಯ್​ ಕುಮಾರ್​, ಮುಖ್ಯ ಸಂಪಾದಕರು, ಪ್ರತಿಕ್ಷಣ
79 ವರ್ಷದ ಇಳಿ ವಯಸ್ಸಿನ ರಾಜಕಾರಣಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ (B S Yadiyurappa) ಮತ್ತು ಅವರ ಪುತ್ರ, ರಾಜಕೀಯ ಉತ್ತರಾಧಿಕಾರಿಯೆಂದೇ ಬಿಂಬಿತರಾಗಿರುವ ಬಿ ವೈ ವಿಜಯೇಂದ್ರ ( B Y Vijayendra) ಅವರಿಗೆ ಕರ್ನಾಕಟದಲ್ಲಿ ವಿಧಾನಸಭಾ ಚುನಾವಣೆಗೆ (Karnataka Election) ಇನ್ನು ಎಂಟು ತಿಂಗಳು ಬಾಕಿ ಇರುವಂತೆ ಆಘಾತವೊಂದು ಬಂದೆರಗಿದೆ.
11 ವರ್ಷಗಳ ಹಿಂದೆ ತಮ್ಮನ್ನು ಜೈಲಿಗಟ್ಟಿದ್ದ ಲೋಕಾಯುಕ್ತವೇ (Lokayukta) ಈಗ ಮತ್ತೆ ಕಂಟಕವಾಗಿ ಕಾಡಲು ಶುರು ಮಾಡಿದೆ, ಅದೂ ಹೊಸ ಪ್ರಕರಣದಲ್ಲಿ. ಉತ್ತರಾಧಿಕಾರಿ ಎಂದೆನಿಸಿರುವ ಪುತ್ರನ ರಾಜಕೀಯ ಭವಿಷ್ಯಕ್ಕೂ ಈಗ ದೊಡ್ಡ ಸವಾಲು ಎದುರಾಗಿದೆ.
ಮುಖ್ಯಮಂತ್ರಿ ಆಗಿದ್ದ ವೇಳೆ ಯಡಿಯೂರಪ್ಪ ಎಸಗಿದ್ದಾರೆ ಎನ್ನಲಾಗಿರುವ ಭ್ರಷ್ಟಾಚಾರದ ಸಂಬಂಧ ಎಫ್​ಐಆರ್​ (FIR) ದಾಖಲಿಸಿ ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ (Bengaluru Court Bangalore Court) ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.
ಪ್ರಕರಣದ ಆರೋಪಿಗಳು:
ಮೊದಲನೇ ಆರೋಪಿ: ಯಡಿಯೂರಪ್ಪ
ಬಿ ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ
ಎಸ್​ ಟಿ ಸೋಮಶೇಖರ್​, ಸಹಕಾರ ಸಚಿವ
ಶಶಿಧರ್​ ಮರಡಿ, ಯಡಿಯೂರಪ್ಪ ಮೊಮ್ಮಗ (ವಿರೂಪಾಕ್ಷಪ್ಪ ಯಮಕನಮರಡಿ ಅವರ ಅಳಿಯ)
ಸಂಜಯ್​ ಶ್ರೀ – ಯಡಿಯೂರಪ್ಪ ಪುತ್ರಿ ಪದ್ಮಾವತಿ ಅಳಿಯ
ಜಿ ಎಸ್​ ಪ್ರಕಾಶ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ
ಆರೋಪಿ 5: ರಾಮಲಿಂಗಂ, ಚಂದ್ರಕಾಂತ ರಾಮಲಿಂಗಂ ಕನಸ್ಟ್ರಕ್ಷನ್​ ಕಂಪನಿಯ ಮಾಲೀಕ
ಕೆ ರವಿ
ಆರೋಪ ಏನು..?
ವಿವಿಧ ಇಲಾಖೆಗಳಲ್ಲಿ ಕಡತ ವಿಲೇವಾರಿ ಮತ್ತು ಅನುದಾನ ಬಿಡುಗಡೆ ಸಂಬಂಧ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪನವರ ಮೇಲೆ ಪ್ರಭಾವ ಬೀರುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್ (Ramalingam Construction)​ ಕಂಪನಿ 12.5 ಕೋಟಿ ರೂಪಾಯಿ ಲಂಚ (Bribe) ನೀಡಿದ ಆರೋಪ.
ಇದಲ್ಲದೇ ಕೋಲ್ಕತ್ತಾದ ವಿಳಾಸ ಹೊಂದಿರುವ 7 ನಕಲಿ ಕಂಪನಿಗಳು (Shell Companies) (ಅಸ್ತಿತ್ವದಲ್ಲಿರದ ಕಂಪನಿಗಳು) ಮೂಲಕ ಬೆಳ್ಗ್ರಾವೀಯಾ ಎಂಟರ್​ಪ್ರೈಸಸ್​​ ಲಿಮಿಟೆಡ್​, ವಿ ಎಸ್​ ಎಸ್​ ಎಸ್ಟೇಟ್ಸ್​ ಪ್ರೈವೇಟ್​ ಲಿಮಿಟೆಡ್​, ವಿ ಎಸ್​ ಎಸ್​ ವರ್ಕ್ಸ್​​ ಪ್ರೈವೇಟ್​ ಲಿಮಿಟೆಡ್​ ಹೆಸರಿನ ಕಂಪನಿಗಳ ಬ್ಯಾಂಕ್​ ಖಾತೆಗೆ ಒಟ್ಟು 8.41 ಕೋಟಿ ರೂ ಮೊತ್ತದ ಹಣ ವರ್ಗಾವಣೆ ಮಾಡಲಾಗಿತ್ತು. ಹಣ ಪಡೆದಿರುವ ಈ ಮೂರು ಕಂಪನಿಗಳಲ್ಲಿ ಶಶಿಧರ್​ ಮರಡಿ ಮತ್ತು ಸಂಜಯ್​ಶ್ರೀ ನಿರ್ದೇಶಕರಾಗಿದ್ದಾರೆ.
ಹಣ ವರ್ಗಾವಣೆ ಮಾಡಿರುವ ಕಂಪನಿಗಳೂ ನಕಲಿ ಮತ್ತು ಆ ನಕಲಿ ಕಂಪನಿಗಳಿಂದ ಯಡಿಯೂರಪ್ಪ ಕುಟುಂಬಸ್ಥರು ಹಣ ಪಡೆದಿರುವ ಮತ್ತು ಅವರು ನಿರ್ದೇಶಕರಾಗಿರುವ ಆ ಕಂಪನಿಗಳೂ ನಕಲಿ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ವಸತಿ ಯೋಜನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬಕ್ಕೆ ರಾಮಲಿಂಗ ಕನಸ್ಟ್ರಕ್ಷನ್​ ಕಂಪನಿ ಲಂಚ ನೀಡಿದ ಆರೋಪ.
ರಾಜ್ಯಪಾಲರಿಂದ ತಿರಸ್ಕೃತ:
ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ಕೋರಿ ಟಿ ಜೆ ಅಬ್ರಾಹಾಂ (T J Abraham) ನವೆಂಬರ್​ 20, 2020ರಂದು ಸಲ್ಲಿಸಿದ್ದ ಅರ್ಜಿಯನ್ನು ಜೂನ್​ 23, 2021ರಂದು ರಾಜ್ಯಪಾಲ (Governor) ವಜೂಭಾಯ್​ ವಾಲಾ ಅವರು ತಿರಸ್ಕರಿಸಿದ್ದರು.
20 ದಿನಗಳ ಕಥೆ:
ನವೆಂಬರ್​ 25, 2020ರಂದು ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಕುಟುಂಬಸ್ಥರು ಮತ್ತು ಇತರರ ವಿರುದ್ಧ ಟಿ ಜೆ ಅಬ್ರಾಹಾಂ ಅವರು ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಗೆ (ACB) ದೂರು ನೀಡಿದ್ದರು. ಆದರೆ ಕೇವಲ 20 ದಿನಗಳಲ್ಲೇ ಅಂದರೆ ಡಿಸೆಂಬರ್​ 15, 2020ರಂದೇ ಪ್ರಕರಣವನ್ನು ಮುಚ್ಚಿತ್ತು.
ನ್ಯಾಯಾಲಯಕ್ಕೆ ಮೊರೆ:
ಆ ಬಳಿಕ ಜೂನ್​ 4, 2021ರಂದು ಟಿ ಜೆ ಅಬ್ರಾಹಾಂ ಯಡಿಯೂರಪ್ಪ ಮತ್ತು ಇತರರ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ಬೆಂಗಳೂರಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಆರೋಪಿ ಸ್ಥಾನದಲ್ಲಿರುವ ಯಡಿಯೂರಪ್ಪ ಆಗ ಮುಖ್ಯಮಂತ್ರಿ ಆಗಿದ್ದ ಕಾರಣ ಅವರ ತನಿಖೆಗೆ ರಾಜ್ಯಪಾಲರಿಂದ ಅನುಮತಿ ಸಿಗದ ಕಾರಣ ಅಬ್ರಾಹಾಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಜುಲೈ 8, 2021ರಂದು ವಜಾ ಮಾಡಿತ್ತು.
ಬೆಂಗಳೂರು ಜನಪ್ರತಿನಿಧಿಗಳ ಆದೇಶ ಪ್ರಶ್ನಿಸಿ ಅಬ್ರಾಹಾಂ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು. ಅಬ್ರಾಹಂ ಅರ್ಜಿ ಮಾನ್ಯ ಮಾಡಿದ್ದ ಹೈಕೋರ್ಟ್​​ ಅಬ್ರಾಹಾಂ ಅರ್ಜಿಯನ್ನು ಹೊಸದಾಗಿ ಆಲಿಸಿ ಆದೇಶ ನೀಡುವಂತೆ ವಾರದ ಹಿಂದೆಯಷ್ಟೇ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸೂಚಿಸಿತ್ತು. ಹೈಕೋರ್ಟ್​ ಸೂಚನೆ ಮೇರೆಗೆ ಈಗ ಜನಪ್ರತಿನಿಧಿಗಳ ನ್ಯಾಯಾಲಯ ಅಬ್ರಾಹಂ ದೂರು ಆಧರಿಸಿ ತನಿಖೆಗೆ ಲೋಕಾಯುಕ್ತಕ್ಕೆ ಸೂಚಿಸಿದೆ.
ಲೋಕಾಯುಕ್ತದಲ್ಲಿ ಮುಂದೇನು..?
ಅಬ್ರಾಹಂ ದೂರಿನಲ್ಲಿ ಉಲ್ಲೇಖಿತರಾಗಿರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಾದ 7, 8, 9, 10 ಮತ್ತು 13, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 383, 384, 415, 418, 420, 34 ಮತ್ತು 120ಬಿ ಅಡಿಯ ಅಪರಾಧಗಳಿಗೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ತನಿಖೆ ನಡೆಸಲು ಬೆಂಗಳೂರಿನ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ನ್ಯಾಯಾಲಯ ಆದೇಶಿಸಿದೆ.
ನವೆಂಬರ್‌ 2ರ ಒಳಗೆ ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಧೀಶ ಬಿ ಜಯಂತ್​ಕುಮಾರ್​ ಆದೇಶಿಸಿದ್ದಾರೆ.
ಲೋಕಾಯುಕ್ತಕ್ಕೆ ಅಗ್ನಿಪರೀಕ್ಷೆ:
ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಎಸಿಬಿ ರದ್ದಾದ ಬಳಿಕ ಕರ್ನಾಟಕ ಲೋಕಾಯುಕ್ತದ ಎದುರು ಬರುತ್ತಿರುವ ಪ್ರಭಾವಿ ರಾಜಕಾರಣಿ ಮತ್ತು ರಾಜಕೀಯ ಕುಟುಂಬದ ಮೊದಲ ಪ್ರಕರಣ ಇದಾಗಿದೆ.
11 ವರ್ಷಗಳ ಹಿಂದೆ ಅಕ್ಟೋಬರ್​ 11ರಂದು ಮುಖ್ಯಮಂತ್ರಿ ಆಗಿದ್ದ ವೇಳೆ ಡಿನೋಟಿಫಿಕೇಷನ್​ ಪ್ರಕರಣದಲ್ಲಿ ಯಡಿಯೂರಪ್ಪರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋದ ಮೊದಲ ಪ್ರಕರಣ ಇದಾಗಿತ್ತು. ಆಗ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆಯವರಿದ್ದರು.
ಕರ್ನಾಟಕ ಹೈಕೋರ್ಟ್​​ ಆದೇಶದಿಂದ ಮತ್ತೆ ಜೀವ ಕಳೆ ಪಡೆದಿರುವ ಕರ್ನಾಟಕ ಲೋಕಾಯುಕ್ತದ ಎದುರು ಈಗ ಮತ್ತೆ ಯಡಿಯೂರಪ್ಪ, ಅವರ ಮಗ, ಮೊಮ್ಮಕ್ಕಳ ಪ್ರಕರಣ ಬಂದಿದೆ. ಈ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಹೇಗೆ ನಿಭಾಯಿಸುತ್ತದೆ ಎನ್ನುವುದರ ಆಧಾರದಲ್ಲಿ ಲೋಕಾಯುಕ್ತದ ವಿಶ್ವಾಸರ್ಹತೆಯನ್ನು ಜನಸಾಮಾನ್ಯರು ನಿರ್ಧರಿಸುತ್ತಾರೆ ಎಂದರೂ ತಪ್ಪಿಲ್ಲ.
ವಿಜಯೇಂದ್ರಗೆ ಅತೀ ದೊಡ್ಡ ರಾಜಕೀಯ ಹಿನ್ನಡೆ:
ವಿಧಾನಪರಿಷತ್​ ಸ್ಥಾನ ಸಿಗದ ಬಳಿಕ ಕೆಲ ದಿನ ಅಲ್ಲಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಆರ್ಭಟಿಸುತ್ತಿದ್ದ ವಿಜಯೇಂದ್ರ ಆ ಬಳಿಕ ನಿಧಾನಕ್ಕೆ ಮೆತ್ತಗಾದರು. ಈಗ ರಾಜಾಹುಲಿಯ ಪುತ್ರನಿಗೆ, ಯಡಿಯೂರಪ್ಪ ರಾಜಕೀಯ ಉತ್ತರಾಧಿಕಾರಿಯ ವಿರುದ್ಧ ಭ್ರಷ್ಟಾಚಾರದ ಆರೋಪದಲ್ಲಿ ಮೊದಲನೇ ಬಾರಿಗೆ ಪ್ರಕರಣವನ್ನು ಎದುರಿಸಬೇಕಾದ ಸವಾಲು. ಇದು ವಿಜಯೇಂದ್ರ ಅವರಿಗೆ ರಾಜಕೀಯ ಹಿನ್ನಡೆಯೂ ನಿಜ.
ಬಲೆ ಬೀಸುತ್ತಾ ED..?
ಅಸ್ತಿತ್ವದಲ್ಲೇ ಇರದ ನಕಲಿ ಕಂಪನಿಗಳ ಮೂಲಕ ಹಣ ವರ್ಗಾವಣೆ ನಡೆಸಿರುವ ಆರೋಪ ಅಕ್ರಮ ಹಣ ವರ್ಗಾವಣೆಗೆ (Money Laundering) ಸಂಬಂಧಿಸಿದ್ದು. ಈ ಆರೋಪದ ಬಗ್ಗೆ ತನಿಖೆ ನಡೆಸಬೇಕಿರುವುದು ಈಡಿ ಅಂದರೆ ಜಾರಿ ನಿರ್ದೇಶಾಲಯ. ಜಾರಿ ನಿರ್ದೇಶನಾಲಯದ ಮೊರೆ ಹೋಗುವುದಾಗಿ ಟಿ ಜೆ ಅಬ್ರಾಹಂ ಹೇಳಿದ್ದಾರೆ. ಒಂದು ವೇಳೆ ಈ ದೂರು ಆಧರಿಸಿ ಈಡಿ (ED)ಯೂ ಪ್ರಕರಣ ದಾಖಲಿಸಿಕೊಂಡರೆ ಆಗ ವಿಜಯೇಂದ್ರ ಸುತ್ತ ಭ್ರಷ್ಟಾಚಾರ ಆರೋಪದ ಕುಣಿಕೆ ಮತ್ತಷ್ಟು ಬಿಗಿ ಆಗಲಿದೆ.
ಈಗಾಗಲೇ ಶೇಕಡಾ 40ರಷ್ಟು ಕಮಿಷನ್​ ಸರ್ಕಾರ, ನೇಮಕಾತಿ ಹಗರಣ ಒಳಗೊಂಡಂತೆ ಹಲವು ಕಳಂಕಗಳ ಸುಳಿಯಲ್ಲಿರುವ ಬಿಜೆಪಿಗೆ ಮತ್ತೊಂದು ರಾಜಕೀಯ ಮುಜುಗರ.

LEAVE A REPLY

Please enter your comment!
Please enter your name here