ಅಸ್ಸಾಂನ ಗುವಾಹಟಿಯಲ್ಲಿ ಭಾರೀ ಭೂ ಕುಸಿತ ಸಂಭವಿಸಿದ್ದು, ನಾಲ್ವರು ದುರ್ಮರಣ ಹೊಂದಿದ್ದಾರೆ. ಬೋರಗಾಂವ್ ಸಮೀಪದ ನಿಜಾರಪರ್ ಪ್ರದೇಶದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ನಾಲ್ವರು ಜೀವಂತ ಸಮಾಧಿಯಾಗಿದ್ದಾರೆ. ಸೋಮವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂ ಕುಸಿತವಾಗಿದೆ.
ಘಟನೆ ನಂತರ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳಡಿ ಸಿಲುಕಿದ್ದ ನಾಲ್ಕು ಮೃತದೇಹಗಳನ್ನು ಹೊರಗೆ ತಂದಿದ್ದಾರೆ. ಮೃತಪಟ್ಟವರು ಈ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು, ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭಾರೀ ಮಳೆಯಿಂದ ಮನೆ ಮುರಿದು ಬಿದ್ದಿದ್ದು, ಬೆಟ್ಟ ಕುಸಿತದಿಂದ ರಾಶಿ ರಾಶಿ ಮಣ್ಣು ಮನೆಯೊಳಗೆ ಬಂದಿದೆ. ಇದರಿಂದಾಗಿ ಕಾರ್ಮಿಕರು ಅವಶೇಷಗಳಡಿ ಸಿಲುಕಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತ ನಂದಿನಿ ಕಾಕಟಿ ಹೇಳಿದ್ದಾರೆ. ಅವಶೇಷಗಳಡಿ ಸಿಲುಕಿದ ನಾಲ್ಕು ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಗುವಾಹಟಿ ಡಿಸಿಪಿ ನಬನೀತ್ ಮಹಾಂತ ತಿಳಿಸಿದ್ದಾರೆ.