ಆಂಧ್ರಪ್ರದೇಶದ ನಿಯೋಜಿತ ರಾಜ್ಯಪಾಲ ಮತ್ತು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಪತ್ನಿ ಸಮೇತ ತಮ್ಮ ಗುರುಗಳಾದ ಖ್ಯಾತ ವಕೀಲ ಎಂ ಕೆ ವಿಜಯ್ ಕುಮಾರ್ ಅವರನ್ನು ಭೇಟಿ ಆಗಿ ಆರ್ಶೀವಾದ ಪಡೆದರು.
ಕಾರ್ಕಳದಲ್ಲಿರುವ ಎಂಕೆ ವಿಜಯ್ ಕುಮಾರ್ ಅವರ ನಿವಾಸ ಸುವ್ರತ ಭವನದಲ್ಲಿ ಈ ಭೇಟಿ ನಡೆಯಿತು.
ಹಿರಿಯ ನ್ಯಾಯವಾದಿ ಎಂ ಕೆ ವಿಜಯ್ ಕುಮಾರ್ ತಮ್ಮ ಶಿಷ್ಯ ನ್ಯಾಯಮೂರ್ತಿ ಶ್ರೀ ಅಬ್ದುಲ್ ನಜೀರ್ರವರು ಭಾರತೀಯ ನ್ಯಾಯಾಂಗಕ್ಕೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು.
ಅಯೋಧ್ಯಾ ಪ್ರಕರಣದ ಬಗೆಹರಿಸುವಲ್ಲಿ ಅವರ ಐತಿಹಾಸಿಕ ತೀರ್ಪು , ತಲಾಖ್ ಪ್ರಕರಣದಲ್ಲಿ ಮುಸಲ್ಮಾನ ಮಹಿಳೆಯರ ಪರವಾದ ಚಾರಿತ್ರಿಕ ತೀರ್ಪು, ಭಾರತೀಯ ಕ್ರಿಕೆಟ್ ಮಂಡಳಿಯ ಸ್ವಾಯತ್ತತೆಯ ಬಗೆಗಿನ ತೀರ್ಪು, ಬೆಂಗಳೂರು ನಗರದ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗೆಗಿನ ಮಹತ್ವದ ತೀರ್ಪು ನೀಡಿದ್ದಾರೆ.
ತುಳುನಾಡಿನ ಕಂಬಳದ ನ್ಯಾಯಬದ್ದತೆಯನ್ನು ಎತ್ತಿಹಿಡಿದ ತೀರ್ಪು, ಭಾರತೀಯ ನಾಗರಿಕರ ಖಾಸಗೀತನದ ಹಕ್ಕನ್ನು (Right to Privacy) ಮೂಲಭೂತ ಹಕ್ಕೆಂದು ಸಾರಿದ ಚಾರಿತ್ರಿಕ ತೀರ್ಪು, ಈ ರೀತಿಯ ಹಲವಾರು ಪ್ರಕರಣಗಳಲ್ಲಿ ಅತ್ಯಂತ ನ್ಯಾಯಬದ್ಧವಾಗಿ ಹಾಗೂ ಸಂವಿಧಾನ ಬದ್ದವಾಗಿ ಅವರು ನೀಡಿರುವ ನೂರಾರು ತೀರ್ಪುಗಳು ಮುಂದಿನ ಹಲವು ಕಾಲ ಭಾರತೀಯ ನ್ಯಾಯವ್ಯವಸ್ಥೆಗೆ ದಾರಿ ದೀಪವಾಗಲಿದೆ .
ಕರ್ನಾಟಕ ಹಾಗೂ ಕರ್ನಾಟಕದ ಕರಾವಳಿಯ ನ್ಯಾಯಾಲಯಗಳ ಮೂಲ ಸೌಕರ್ಯ ಅಭಿವೃದ್ದಿ, ಬ್ರಹತ್ ನೂತನ ಮತ್ತು ಅತ್ಯಂತ ಸುಸಜ್ಜಿತ ನ್ಯಾಯಾಂಗ ಕಟ್ಟಡಗಳ ನಿರ್ಮಾಣ, ವಕೀಲರ ಸಂಘಗಳ ಕಟ್ಟಡ ನಿರ್ಮಾಣ , ಯುವ ವಕೀಲರ ಕಲ್ಯಾಣ, ನ್ಯಾಯಾಂಗ ಸಿಬ್ಬಂದಿಯ ಯಶೋಭಿವ್ರದ್ದಿ ಈ ಮೊದಲಾದ ಕಾರ್ಯಗಳಲ್ಲಿ ಅತ್ಯಂತ ಕಾಳಜಿ ವಹಿಸಿ ಕಾರ್ಯನಿರ್ವಹಿಸಿದ್ದಾರೆ
ಎಂದು ಹಿರಿಯ ವಕೀಲ ಎಂ ಕೆ ವಿಜಯ್ ಕುಮಾರ್ ಅವರು ಪ್ರಶಂಸಿದರು.