ನಟಿ ಸಮಂತಾಗೆ ಮಯೋಸೈಟಿಸ್ ರೋಗ.. ಏನಿದು?

ನಟಿ ಸಮಂತಾ ಅವರು ಅಪರೂಪದ ಮಯೋಸೈಟಿಸ್ ರೋಗದಿಂದ ಬಳಲುತ್ತಿದ್ದಾರೆ. ಸಲೈನ್ ಹಾಕಿಸಿಕೊಳ್ಳುತ್ತಿರುವ ಫೋಟೋ ಶೇರ್ ಮಾಡುವ ಮೂಲಕ ಈ ವಿಚಾರವನ್ನು ಸ್ವತಃ ಸಮಂತಾ ಬಹಿರಂಗಪಡಿಸಿದ್ದಾರೆ.

ಜೀವನದಲ್ಲಿ ಕೊನೆಯಿಲ್ಲದ ಸವಾಲುಗಳು ಎದುರಾಗಿವೆ. ನೀವು ತೋರಿಸುತ್ತಿರುವ ಪ್ರೀತಿ, ಅಭಿಮಾನ ನನಗೆ ಮತ್ತಷ್ಟು ಚೈತನ್ಯ, ಈ ಸವಾಲುಗಳನ್ನು ಎದುರಿಸುವ ಶಕ್ತಿ ಕೊಡುತ್ತಿದೆ. ಕಳೆದ ಕೆಲ ದಿನಗಳಿಂದ ಮಯೋಸೈಟಿಸ್ ಎಂಬ ಆಟೋ ಇಮ್ಯೂನಿಟಿ ಕಂಡೀಶನ್ ಗೆ ಚಿಕಿತ್ಸೆ ಪಡೆಯುತ್ತಿರುವೆ. ಈಗ ನನ್ನ ಆರೋಗ್ಯ ಸ್ಥಿರವಾಗಿದೆ. ಈಗೀಗ ಚೇತರಿಸಿಕೊಳ್ಳುತ್ತಿದ್ದೇನೆ. ಆದರೆ, ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯವೇ ಹಿಡಿಯುವ ನಿರೀಕ್ಷೆ ಇದೆ.

ಎಲ್ಲಾ ಸಂದರ್ಭದಲ್ಲೂ ಬಲವಾಗಿ ಮುಂದಕ್ಕೆ ನುಗ್ಗುಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಾಗಿದೆ. ಪ್ರತಿಯೊಂದನ್ನು ಸ್ವೀಕರಿಸುತ್ತಲೇ ಹೋರಾಟ ಮುಂದುವರೆಸುವೆ. ಶೀಘ್ರವೇ ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತೇನೆ ಎಂಬ ನಂಬಿಕೆ ವೈದ್ಯರಲ್ಲಿದೆ.

ನನ್ನ ಜೀವನದಲ್ಲಿ ಮಾನಸಿಕವಾಗಿ, ಶಾರೀರಿಕವಾಗಿ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ನೋಡಿದ್ದೇನೆ. ಇಂತಹ ಸನ್ನಿವೇಶಗಳನ್ನು ಒಂದು ಕ್ಷಣವೂ ಕೂಡ ಭರಿಸಲಾರೆ ಎಂದು ಭಾವಿಸಿದ ಸಂದರ್ಭಗಳು ಇವೆ. ಆದರೇ, ಹೇಗೋ ಆ ಕ್ಷಣಗಳು ಕೂಡ ಕಳೆದುಹೋಗಿವೆ. ನಾನು ಪೂರ್ತಿಯಾಗಿ ಚೇತರಿಸಿಕೊಳ್ಳುವ ದಿನಗಳು ಹತ್ತಿರದಲ್ಲೇ ಇವೆ.. ಐ ಲವ್ ಯು ಎಂದು ಸಮಂತಾ ಟ್ವೀಟ್ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಇರಲಿಲ್ಲ. ಹೀಗಾಗಿ ಅವರ ಅನಾರೋಗ್ಯದ ನಾನಾ ವದಂತಿ ಹಬ್ಬಿದ್ದವು. ಸಮಂತಾ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು.