ಎಎಪಿ ಶಾಸಕನ ಬೆಂಬಲಿಗರಿಂದ ಎಸಿಬಿ ಅಧಿಕಾರಿ ಮೇಲೆ ಹಲ್ಲೆ – ನಾಲ್ವರ ಬಂಧನ

Amanatullah Khan

ದೆಹಲಿಯ ಎಎಪಿ ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಬೆಂಬಲಿಗರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಯೊಬ್ಬರನ್ನು ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅಮಾನತುಲ್ಲಾ (Amanatullah Khan) ಬೆಂಬಲಿಗರ ಗುಂಪೊಂದು ಎಸಿಬಿ ಅಧಿಕಾರಿಯೊಬ್ಬರನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಕ್ಫ್ ಮಂಡಳಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಅಮಾನತುಲ್ಲಾ ಖಾನ್ ಅವರನ್ನು ಶುಕ್ರವಾರ ಬಂಧಿಸಿದ್ದರು. ಖಾನ್‌ ಅವರ ನಿವಾಸ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಎಸಿಬಿ ಶೋಧ ಕಾರ್ಯಾಚರಣೆ ನಡೆಸಿದ್ದು, ದಾಳಿ ವೇಳೆ 24 ಲಕ್ಷ ರೂ. ಹಣ, ಪರವಾನಗಿ ಪಡೆಯದೆ ಇಟ್ಟುಕೊಂಡಿದ್ದ ಎರಡು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿತ್ತು. ಇದನ್ನೂ ಓದಿ : ಖಲಿಸ್ತಾನದ ಬೇಡಿಕೆ ಸಾಂವಿಧಾನಿಕ ಹಕ್ಕು ಎಂದ ಎಎಪಿ ನಾಯಕ

ವಕ್ಫ್ ಮಂಡಳಿಗೆ ಸಂಬಂಧಿಸಿದ ನೇಮಕಾತಿ ಅಕ್ರಮಗಳ ಕುರಿತು ಎಸಿಬಿ ತನಿಖೆ ನಡೆಸುತ್ತಿದ್ದು, 2020ರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಖಾನ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು.

ಎಸಿಬಿ ದಾಳಿ ನಡೆಸಿದ ಬಳಿಕ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ಆಪ್ತ ಹಮೀದ್ ಅಲಿ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ದಾಳಿ ವೇಳೆ ಲೈಸೆನ್ಸ್‌ರಹಿತ ಪಿಸ್ತೂಲು, 12 ಲಕ್ಷ ರೂ. ನಗದು ಹಾಗೂ ಕೆಲವು ಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು, ಎಸಿಬಿ ಅಧಿಕಾರಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ 4 ಜನರನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ಪಂಜಾಬ್​ನ 10 ಎಎಪಿ ಶಾಸಕರನ್ನು ಸಂಪರ್ಕಿಸಿದ ಬಿಜೆಪಿ – ಅರವಿಂದ್ ಕೇಜ್ರಿವಾಲ್ ಆರೋಪ

LEAVE A REPLY

Please enter your comment!
Please enter your name here