ಹಾಸನ: ಹಾಸನ ಜಿಲ್ಲಾ ಪಂಚಾಯಿತಿಯ ನೌಕರನ ಮೇಲೆ ಉಪ ವಿಭಾಗಾಧಿಕಾರಿ ಬಿಎ ಜಗದೀಶ್ ದೈಹಿಕ ಹಲ್ಲೆ ಮಾಡಿರುವ ಘಟನೆ ಹಾಸನಾಂಬೆಯ ಸನ್ನಿಧಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ ದರ್ಶನಕ್ಕೆ ಬಂದಿದ್ದ ಜಿಲ್ಲಾ ಪಂಚಾಯಿತಿಯ ನೌಕರ ಶಿವೇಗೌಡ ಎಂಬುವರಿಗೆ ಎಸಿ ಜಗದೀಶ್ ಕಪಾಳ ಮೋಕ್ಷ ಮಾಡಿದ್ದು, ಕುಟುಂಬ ಸಮೇತ ಬಂದಿದ್ದ ಶಿವೇಗೌಡನ ಜೊತೆಗೆ ಮಾತಿಗೆ ಮಾತು ಬೆಳೆಸಿ ಕಪಾಳ ಮೋಕ್ಷ ಮಾಡಲಾಗಿದೆ.
ಅಷ್ಟೇ ಅಲ್ಲದೇ ಅವರಿಗೆ ದರ್ಶನಕ್ಕೆ ಅವಕಾಶ ನೀಡದೇ ಹೀನಾಯವಾಗಿ ನಡೆಸಿಕೊಂಡಿದ್ದು, ಘಟನೆಯ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದೇವಸ್ಥಾನಕ್ಕೆ ಆಗಮಿಸುವಂತಹ ಭಕ್ತರನ್ನ ಬಹಳ ಗೌರವದಿಂದ ನಡೆಸಿಕೊಳ್ಳಬೇಕಾದ್ದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯ. ಆದರೆ, ಹಾಸನಾಂಬ ದೇವಾಲಯದಲ್ಲಿ ಮಾತ್ರ ಅಧಿಕಾರಿಗಳ ದರ್ಪ ಎದ್ದು ಕಾಣುತ್ತಿದ್ದು, ಈ ಘಟನೆ ಅಧಿಕಾರಿಗಳ ದರ್ಪದ ವರ್ತನೆಗೆ ಸಾಕ್ಷಿಯಾಗಿದೆ.
ಹಾಸನಾಂಬ ದರ್ಶನ ಪ್ರಾರಂಭವಾದ ಬಳಿಕ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪ್ರತಿ ನಿತ್ಯ ಸಾವಿರಾರು ಭಕ್ತಾದಿಗಳು ದರ್ಶನ ಪಡೆಯುತ್ತಿದ್ದಾರೆ. ಆದ್ರೆ ದರ್ಶನಕ್ಕೆ ಬಂದ ಭಕ್ತಾಧಿಗಳ ನಡುವೆಯೇ ಇಂತಹ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಮಾಡಿರೋ ಎಡವಟ್ಟಿನಿಂದಾಗಿ ಬೇರೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಲೆ ತಗ್ಗಿಸುವಂತಾಗಿದೆ.