ಭಾರತೀಯ ಜೈನ್ ಮಿಲನ್ ಅವರ 19 ನೇ ವಲಯ ಸಮ್ಮೇಳನ ಮೂಡುಬಿದಿರೆಯ ಎಕ್ಸ್ ಲೆಂಟ್ ಕಾಲೇಜಿನ ಸಭಾಂಗಣದಲ್ಲಿ ವೈಭವವಾಗಿ ಜರಗಿತು.
ಸಮಾರಂಭದಲ್ಲಿ ಆಶೀರ್ವಚನವನ್ನು ದಯಪಾಲಿಸಿದ ಕಾರ್ಕಳ ಜೈನ ಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹಾಗೂ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನವನ್ನು ದಯಪಾಲಿಸಿ ಧರ್ಮ ಪರಂಪರೆ, ಸಂಸ್ಕೃತಿ ಮನುಷ್ಯನ ಬದುಕಿಗೆ ಪೂರಕವಾಗಿರಬೇಕು ಹಾಗೂ ಇದು ಸಮಾಜದ ಸ್ವಾಸ್ಥ್ಯಕ್ಕೂ ಪ್ರೇರಣೆಯಾಗುತ್ತದೆ ಎಂದರು. ಜನಮಾನಸದಲ್ಲಿ ಅಹಿಂಸೆಯ ಪಾಲನೆ ಅತೀ ಅಗತ್ಯವಾಗಿದ್ದು ಇದು ವಿಶ್ವಶಾಂತಿಗೆ ಮೂಲ ಎಂದು ಸ್ವಾಮೀಜಿದ್ವಯರು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ ಜೈನ್ ಮಿಲನ್ ಕಾರ್ಯಗಳನ್ನು ಪ್ರಶಂಸಿದರು. ಸಮಾಜದ ಸಂಘಟನೆ ಸಮುದಾಯದ ಪ್ರಗತಿಗೆ ಸಹಾಯಕ ಎಂದರು. ಸಮಾಜ ಸಂಘಟನೆಗಳು ಮಾನವೀಯತೆಯ ಪ್ರತೀಕವಾಗಿ ಕೆಲಸಗಳನ್ನು ಮಾಡಬೇಕು ಹಾಗೂ ಸಮಾಜದ ಅಭ್ಯುದಯಕ್ಕೆ ನೆರವಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರಾದ ಶ್ರೀ ಸುನಿಲ್ ಕುಮಾರ್ ಮಾತನಾಡಿ ಮೂಡುಬಿದಿರೆ ಜೈನ ಕಾಶಿಯಾಗಿದ್ದು ಕಾರ್ಕಳ ಹಾಗೂ ಮೂಡುಬಿದಿರೆ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ಜೈನ ಧರ್ಮದ ಪ್ರಭಾವ ನನ್ನ ಮೇಲಾಗಿದ್ದು ಜೈನ ಧರ್ಮದ ವಿಚಾರಗಳು ಸಮಾಜದ ಹಿತದಲ್ಲಿ ಅಪೂರ್ವ ಕೊಡುಗೆಯಾಗಿದೆ ಎಂದರು
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ ಡಿ ಸುರೇಂದ್ರ ಕುಮಾರ್ ಧರ್ಮಸ್ಥಳ ಅವರು ಮಾತನಾಡುತ್ತಾ ಜೈನ್ ಮಿಲನ್ ನಂತಹ ಸಂಘಟನೆಗಳು ಸಮಾಜದ ಉನ್ನತೀಕರಣಕ್ಕೆ ಹಾಗೂ ಏಕತ್ವದ ಭಾವನೆಯನ್ನು ಮೂಡಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿ ಮುಂದುವರೆದಾಗ ದೇಶದ ಅಭಿವೃದ್ಧಿಗೂ ಸಹಾಯಕವಾಗುತ್ತದೆ ಎಂದರು. ಮುಂದಿನ ವಲಯ ಸಮ್ಮೇಳನವು ಕೇರಳದ ವೈನಾಡಿನಲ್ಲಿ ನಡೆಯಲಿದೆ ಎಂದು ಘೋಷಿಸಿದರು.
ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಜೈನ್ ಮಿಲನ್ ಮೂಲಕ ಜಿನ ಭಜನಾ ಸ್ಪರ್ಧೆ ಏರ್ಪಡಿಸುವ ಮೂಲಕ ಸಮಾಜವು ವಿಭಜನೆಯಾಗದೇ ಒಗ್ಗಟ್ಟಾಗಿರುತ್ತದೆ ಎಂದರು. ಮುಂದಕ್ಕೆ ಜೈನ್ ಮಿಲನ್ ವತಿಯಿಂದ ಸಂಸ್ಕಾರ ಶಿಬಿರ ನಡೆಸಲಾಗುವುದು ಎಂದರು.
ಎಕ್ಸ್ ಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಅವರಿಗೆ ಮಿಲನಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಧಾರ್ಮಿಕ ಚಿಂತಕ ನಿರಂಜನ್ ಜೈನ್ ಕುದ್ಯಾಡಿ ಇವರಿಗೆ ರಾಜ್ಯ ಮಟ್ಟದ ಸಾಧಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಸಮಾರಂಭದಲ್ಲಿ ಮಾಜಿ ಸಚಿವ ಶ್ರೀ ಅಭಯಚಂದ್ರ ಜೈನ್ , ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಎಮ್ ಎನ್ ರಾಜೇಂದ್ರ ಕುಮಾರ್, ಶ್ರೀ ಪ್ರಸನ್ನ ಕುಮಾರ್ ಉಡುಪಿ, ಇ ವಿ ಅಜ್ಜಪ್ಪ ಹೊಸದುರ್ಗ, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಎಂ ಎಸ್ ಮೃತ್ಯುಂಜಯ್ ಜೈನ್ ಮೈಸೂರು, ಎಕ್ಸ್ ಲೆಂಟ್ ಯುವರಾಜ್ ಜೈನ್ ಮೂಡುಬಿದಿರೆ, ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ ಉಪನ್ಯಾಸಗೈದರು.
ಜೈನ್ ಮಿಲನ್ ವಲಯ ೮ ರ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ರಾಜೇಶ್ ಎಂ ವಂದಿಸಿದರು. ರಾಜ್ಯದ ವಿವಿಧ ಕಡೆಗಳ ಮಿಲನ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಜೈನ್ ಮಿಲನ್ ಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸಹಸ್ರಾರು ಜೈನ ಬಾಂಧವರು ಕಾರ್ಯಕ್ರಮದಲ್ಲಿ ಸಂತಸ ಸಡಗರದಿಂದ ಪಾಲ್ಗೊಂಡಿದ್ದರು. ಸುದರ್ಶನ್ ಜೈನ್ ಬಂಟ್ವಾಳ , ನಮಿರಾಜ್ ಜೈನ್ ಮೂಡುಬಿದಿರೆ, ರಶ್ಮಿತಾ ಯುವರಾಜ್ ಮೂಡುಬಿದಿರೆ ಮುಂತಾದ ಜೈನ್ ಮಿಲನ್ ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದ ಮುನ್ನಾದಿನ ಸಾವಿರ ಕಂಬದ ಬಸದಿಯಲ್ಲಿ ಲಕ್ಷದೀಪೋತ್ಸವವನ್ನು ಬಹಳ ಭಕ್ತಿಭಾವದಿಂದ ಆಚರಿಸಲಾಯಿತು. ಮಕ್ಕಿಮನೆ ಕಲಾವೃಂದ ತಂಡ ಮತ್ತು ಇತರರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.