ಒಂದು ದೇಶದ ಆಗುಹೋಗುಗಳಲ್ಲಿ ಯುವಕರ ಪಾತ್ರ ಹಿರಿದಾಗಿರುತ್ತದೆ. ಯುವ ಪಡೆ ಒಂದು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನು ನೀಡಬಲ್ಲುದಾಗಿದೆ. ಯುವಕರು ಒಂದು ದೇಶ ನಿರ್ಮಾಣದಲ್ಲಿ ತೊಡಗಿಸಿಕೊಂಡರೆ ಆ ದೇಶ ಪ್ರಗತಿ ಕಾಣುವುದರಲ್ಲಿ ಸಂಶಯವಿಲ್ಲ.
ಬೆಂಗಳೂರು ಜಗತ್ತಿನ ಅತೀ ವೇಗವಾಗಿ ಬೆಳೆಯುವ ಪಟ್ಟಣಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಈ ಪಟ್ಟಣದಲ್ಲಿ ಪ್ರಪಂಚದ ನಾನಾಭಾಗಗಳಿಂದ ಬಂದು ನೆಲೆಸಿದವರಿದ್ದಾರೆ, ಉದ್ಯೋಗ ಮಾಡುವವರಿದ್ದಾರೆ. ಎಲ್ಲಾ ಮತಧರ್ಮಗಳ ಜನಗಳು ಇಲ್ಲಿ ಇದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿ ಉದ್ಯೋಗ ಮಾಡಲು ಬಂದವರಿದ್ದಾರೆ. ಹೀಗೆ ಉದ್ಯೋಗವನ್ನು ಮಾಡುತ್ತಿರುವ ಯುವ ಪಡೆಯ ಮನಸ್ಸುಗಳ ಸಂಘಟನೆಯೇ ಭಾರತೀಯ ಜೈನ್ ಮಿಲನ್ ಇದರ ಕೂಸಾದ ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು.
ಸುಹಾಸ್ತಿ ಯುವಜೈನ್ ಮಿಲನ್
2014 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಸುಹಾಸ್ತಿ ಯುವ ಜೈನ್ ಮಿಲನ್ ಯುವ ಪಡೆಗಳ ಚೇತೋಹಾರಿ ಚಟುವಟಿಕೆಗಳಿಗೆ, ಧೀಮಸ್ಸಿಗೆ , ಪುಟಿಯುವ ಚೈತನ್ಯಕ್ಕೆ ವೇದಿಕೆಯಾಯಿತು.
ಗ್ರಾಮೀಣ ಕ್ರೀಡೆಯಾದ ಲಗೋರಿಯ ಗುರಿಯೊಂದಿಗೆ ಆಟವಾಡಿದ ತರುಣರ ಮಸ್ತಿಷ್ಕದಲ್ಲಿ ಭಿನ್ನ ಭಿನ್ನ ಯೋಚನೆ, ಯೋಜನೆಗಳ ಟಸಿಲೊಡೆದು ಕಾರ್ಯರೂಪಕ್ಕೆ ಬರಲಾರಂಭಿಸಿತು.
ಕಬ್ಬಡ್ಡಿ ಪಂದ್ಯಾಟದಲ್ಲಿ ಯುವಕರ ಶಕ್ತಿಯ ಬೆವರಿಳಿಸಿ, ವಿಕೆಟ್ ಗಳ ನಡುವೆ ಓಡಿಸಿ ಫೋರ್ ಸಿಕ್ಸ್ ಗಳ ಅಬ್ಬರದ ನಡುವೆ ಕ್ರಿಕೆಟ್ ಅಟವಾಡುತ್ತಾ ಸ್ವಚ್ಛ ಮನಸ್ಸಿನ ಮನೋಭಾವದ ನಡುವೆ ಬಸದಿಗಳ ಸ್ವಚ್ಛತೆಗೆ ಧುಮುಕಿದರು. ಈ ಕಲರವದ ನಡುವೆ ಅನಾಥಾಲಯಗಳಿಗೆ ಭೇಟಿಕೊಟ್ಟು ಅನಾಥ ಮನಸ್ಸುಗಳಿಗೆ ಸಾಂತ್ವನದ ಮಾತುಗಳನ್ನಾಡಿ ಪರಿಸರ ದಿನಾಚರಣೆಗೆ ಓಗೊಟ್ಟು ವೃಕ್ಷಗಳ ನೆಟ್ಟು ಹಸಿರ ರಾಶಿ ಮೊಗೆಮೊಗೆದು ಬರಲಿ ಎಂದು ಕೇಕೆ ಹಾಕಿದರು. ಆರೋಗ್ಯವೇ ಭಾಗ್ಯವೆಂದರಿತು ಭಯಗೊಂಡ ಮನಸ್ಸುಗಳಿಗೆ ಧನಸಹಾಯದ ಮೂಲಕ ಅಭಯದ ಸಾಂತ್ವನದ ಮೂಲಕ ಭಯಗೊಳ್ಳದಿರಿ ಎಂದರು. ಜೈನ ಧಾರ್ಮಿಕ , ಸಾಮಾಜಿಕ ಸಮಾರಂಭಗಳಿಗೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ಕೈಕಟ್ಟಿ ನಿಂತರು. ಧರ್ಮಕ್ಕೆ ಸಮಾಜಕ್ಕೆ ನೆರಳಾದವರು ಇಹಲೋಕ ತ್ಯಜಿಸಿದಾಗ ಅವರ ಸೇವೆಯ ನೆನೆದು ಶೃದ್ಧಾಂಜಲಿಯನು ಅರ್ಪಿಸಿ ನುಡಿನಮನಗೈದರು. ಭಗವಾನ್ ಮಹಾವೀರರ ಜನ್ಮ ಕಲ್ಯಾಣದ ಉತ್ಸವ ಮಾಡಿ ರಾಜ್ಯದ ಬೇರೆ ಬೇರೆ ಕಡೆ ಭಗವಂತರ ಚಿತ್ರ ಬರೆಯುವ ಸ್ಪರ್ಧೆಯನ್ನು ಮಕ್ಕಳಿಗೆ ಒಡ್ಡಿದರು. ವಿದೇಶದಲ್ಲಿ ನಮ್ಮ ಮಕ್ಕಳಿಗೆ ಜೈನ ಧರ್ಮದ ಪಾಠ ಬೋಧಿಸುವ ಕಾರ್ಯಕ್ರಮವನ್ನು ಅಂತರ್ಜಾಲದ ಮೂಲಕ ಮಾಡಿ ಅಷ್ಟ ವಿಧಾನರ್ಚನೆಯ ಪಾಠವನ್ನೂ ಮಹತ್ವವನ್ನೂ ತಿಳಿಯಪಡಿಸಿದರು.
ಜಿನ ಸಮ್ಮಿಲನಕ್ಕಾಗಿ ಸ್ಪರ್ಧೆಗಳ ಆಯೋಜನೆ
ಮನಸ್ಸು ಮನಸ್ಸುಗಳು ಮಿಲನವಾದಾಗ ಸಮಾಜದಲ್ಲಿ ಐಕ್ಯತೆ ಉಂಟಾಗುತ್ತದೆ. ಕಳೆದ ಆರು ವರ್ಷಗಳಿಂದ ಮನಸ್ಸು ಮನಸ್ಸುಗಳನ್ನು ಮಿಲನಗೊಳಿಸಿ ಐಕ್ಯತೆಯ ಮಂತ್ರ ಹೇಳಿ ಸಮ್ಮಿಲನದ ಪತಾಕೆಯನ್ನು ಹಾರಿಸಿದರು. ವಿವಿಧ ಸ್ಪರ್ಧೆಗಳ ಆಯೋಜಿಸಿ , ಮಕ್ಕಳ ಮೂಲಕ ಮನೆಯ ಮುಂದೆ ರಂಗೋಲಿಯ ಚಿತ್ತಾರ ಮೂಡಿಸಿದರು. ಮಕ್ಕಳಿಗೆ ವಿವಿಧ ವೇಷ ಭೂಷಣಗಳ ತೊಡಿಸಿ ಛದ್ಮರೂಪದಿ ಪ್ರದರ್ಶಿಸಿದರು. ಭಾಷಣ ಸ್ಪರ್ಧೆಯ ಮೂಲಕ ವಾಗ್ ಸುಧೆಯನ್ನು ಹರಿಸಿದರು. ನೆರಳು ಬೆಳಕಿನ ಆಟದ ನಡುವೆ ಸುಂದರ ಚಿತ್ರಪಟದ ಸ್ಪರ್ಧೆಯನ್ನು ಏರ್ಪಡಿಸಿ ಕುಂಚದ ಮೂಲಕವೂ ನಿಮ್ಮ ನಿಮ್ಮ ಭಾವನೆಗಳು ಚಿತ್ತಾರ ಮೂಡಿಸಿ ಎಂದು ಅವಕಾಶವಿತ್ತರು. ನಳಪಾಕದ ಮೂಲಕ ಮಹಿಳೆಯರ ಪಾಕ ರುಚಿ ಸ್ಪರ್ಧೆಯ ಪರಿಚಯವನ್ನು ಜನರಿಗೆ ಉಣಬಡಿಸಿದರು. ಕಿರು ಚಿತ್ರ ಸ್ಪರ್ಧೆಯ ಮೂಲಕ ಅಭಿನಯ ಕಲೆಗೆ ಮಾರುಹೋದರು. ಕವನಗಳ ರಚಿಸಿ ವಾಚಿಸಿ ಸ್ಪರ್ಧೆಗೆ ರಂಗು ತನ್ನಿರೆಂದು ಕಿವಿಕೊಟ್ಟರು.
ಸಮ್ಮಿಲನಗಳು
ಸಾಮಾಜಿಕ ಮಾಧ್ಯಮವಾಗಿರುವ ಪತ್ರಕರ್ತರನ್ನು ಒಂದೇ ವೇದಿಕೆಯಲ್ಲಿ ಮಿಲನಗೊಳಿಸಿ, ವಕೀಲರ ಸಮ್ಮಿಲನದ ಮೂಲಕ ನ್ಯಾಯದ ಮಹತ್ವಕ್ಕೆ ಒತ್ತುಕೊಟ್ಟರು. ಅಹಿಂಸೆಯೇ ಪರಮ ಧರ್ಮವೆಂದು ಸಾರಿ ಅಹಿಂಸಾ ವೇದಿಕೆಯ ನಿರ್ಮಿಸಿ ಜಗತ್ತಿಗೆ ಅಹಿಂಸೆಯ ಮಹತ್ವ ಸಾರಿದರು. ಸುಶ್ರಾವ್ಯವದ ಗಾನಕೋಗಿಲೆಗಳ ಸಮ್ಮಿಲನಗೊಳಿಸಿ ಮಹಿಳೆಯರ ಸಮ್ಮಿಲನಕ್ಕೂ ಒತ್ತುಕೊಟ್ಟು ನಾರೀಮಣಿಯ ರಂಗುರಂಗಿನ ಸಾಧನೆಗಳ ಸ್ಮರಿಸಿದರು. ರೈತನೇ ಈ ದೇಶದ ಬೆನ್ನೆಲುಬು ಎಂದರಿತು ರೈತರ ಒಗ್ಗೂಡಿಸಿ ರೈತರ ಮಿಲನಕ್ಕೆ ಒತ್ತುಕೊಟ್ಟರು. ಚಾವಡಿಯಲ್ಲಿ ಕುಳಿತು ಪರಸ್ಪರ ಚರ್ಚೆ ಮಾಡುವಂತೆ ವೇದಿಕೆ ನಿರ್ಮಿಸಿ , ಕಲಾವಿದರ ಚಿತ್ತಾರದ ಸಮ್ಮಿಲನಗೊಳಿಸಿ ಜಿನಭಗವಂತನಿಗೆ ಸಮ್ಮಿಲನಾರತಿ ಬೆಳಗಿ world book of record ದಾಖಲಾಗಿ ಇತಿಹಾಸ ನಿರ್ಮಿಸಿದರು.
ಸ್ನೇಹ ಸಹಕಾರದ ಸಂಸ್ಥೆಗಳು ಕಾರ್ಯಕ್ರಮ
ಸುಹಾಸ್ತಿ ಯುವ ಜೈನ್ ಮಿಲನ್ ಇವರ ಉತ್ಸಾಹಿಶೀಲ ಕಾರ್ಯಕರ್ತರ ಪ್ರಶಂಸೆಗೆ ಮೆಚ್ಚಿ ಹಲವರು ಕೈ ಜೋಡಿಸಿದರು. ಇಂಟರ್ನ್ಯಾಷನಲ್ ಜೈನ್ ಫ್ರೆಂಡ್ಸ್ ಗ್ರೂಪ್, ಕರ್ನಾಟಕದಲ್ಲಿ ಜೈನ ಧರ್ಮ ಬಳಗ, ಮಹಾನ್ ವೀರ ಬಳಗ, ಜಿನಗಾನಸುಧಾ ಬಳಗ, ಬಸದಿ ಗ್ರೂಪ್, ಜೈನ್ ಆರ್ಟಿಸ್ಟ್ ಗ್ರೂಪ್ ಕೈ ಜೋಡಿಸಿದರು. ಇವರೆಲ್ಲರ ಸಹಕಾರದೊಂದಿಗೆ ಅಂತರಾಷ್ಟ್ರೀಯ ಜಿನಸಮ್ಮಿಲನ, ಚೈತ್ರ ವಸಂತೋತ್ಸವ, ಭಗವಾನ್ ಮಹಾವೀರ ಜನ್ಮ ಕಲ್ಯಾಣ, ಶ್ರುತಪಂಚಮಿ ಕಾರ್ಯಕ್ರಮಗಳು ಮೂಡಿಬಂದವು.
ಅದರಲ್ಲೂ ಕರ್ನಾಟಕದಲ್ಲಿ ಜೈನ ಧರ್ಮ ಬಳಗದ ಒಡನಾಟದೊಂದಿಗೆ ಧರ್ಮ ಚಿಂತನೆ ಭಾನುವಾರದ ನೇರ ಪ್ರಸಾರ ಕಾರ್ಯ ಕ್ರಮ, ಚಿಣ್ಣರ ಜಿನಭಜನೆ ಕಾರ್ಯಕ್ರಮ, ನಿಮ್ಮ ಜಿನಗಾನ ಕಾರ್ಯಕ್ರಮ, ಜೈ ನ್ ಫುಡ್ ಕಾರ್ಯಕ್ರಮ, ದಿನಕ್ಕೊಂದು ಜೈನ ಪ್ರತಿಮೆ ದರ್ಶನ ಕಾರ್ಯಕ್ರಮ, ದಶಲಕ್ಷಣ ಉಪನ್ಯಾಸ ಮಾಲಿಕೆ, ಸಾಮೂಹಿಕ ಕ್ಷಮಾವಾಣಿ, ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮಗಳು ಜನಮಾನಸದ ಮುಂದೆ ನೀರಿನ ಚಿಲುಮೆಯಂತೆ ಚಿಮ್ಮಿಚಿಮ್ಮಿ ಧಾರೆಧಾರೆಯಾಗಿ ಹರಿದು ಬಂತು. ಬಸದಿ ಪರಿಚಯ, ಹಾಗೂ ವಿವಿಧ ಕಾರ್ಯಕ್ರಮಗಳು ಧರ್ಮ ಬಂಧುಗಳ ಮನತಣಿಸಿತು.
ಮಹಾನ್ ವೀರ ಬಳಗದೊಂದಿಗೆ ಹೆಜ್ಜೆಗೆ ಹೆಜ್ಜೆ ಹಾಕಿ ಸಾಧಕರ ಪರಿಚಯ ಮಾಲೆ, ಸಾಧಕರ ಸಂದರ್ಶನ, ಮಹನೀಯರ ವಿಟಿ ಶೋ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೆರ್ಗಡೆಯಾದವರ ಪರಿಚಯ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದವರ ಪರಿಚಯ ಹಾಗೂ ಅಭಿನಂದನಾ ಕಾರ್ಯಕ್ರಮ, ಜೈನ ಸ್ವತಂತ್ರ ಹೋರಾಟಗಾರರು ಸರಣಿ ಕಾರ್ಯಕ್ರಮ ಮೂಡಿಬಂದು ಮನರಂಜಿಸಿತು.
ಬಸದಿ ತಂಡದ ಕೆಲವು ಕಾರ್ಯಕ್ರಮಗಳು – ದಿನಕ್ಕೊಂದು ಜಿನ ಪ್ರತಿಮೆ ದರ್ಶನ, ಜೈನ ಬಸದಿಗಳ ಪರಿಚಯ ಲೇಖನ ಸರಣಿ, ಕರ್ನಾಟಕದ ಜೈನ ಬಸದಿಗಳ ಸರ್ವೆ, ಬಸದಿಗಳಿಗೆ ಸಂಬಂಧಪಟ್ಟ ಮಾಹಿತಿ ಸಂಗ್ರಹದ ಮೂಲಕ ಧಾರ್ಮಿಕ ಕ್ಷೇತ್ರದ ಪರಂಪರೆಯ ಪರಿಚಯವನ್ನು ಕೊಡುಗೆಯಾಗಿ ನೀಡಿತು.
ಜಿನ ಸಮ್ಮಿಲನದಲ್ಲಿ ಮೈಲಿಗಲ್ಲು
ಈ ಬಾರಿಯ ಜಿನಸಮ್ಮಿಲನ ಮಹತ್ವವಾಗಿ ದೇಶದ ಗಡಿದಾಟಿ ದುಬೈನಲ್ಲಿ ನಡೆಯಲಿದೆ. ದುಬೈನ ಜೈನ್ ಮಿಲನ್ ಅತಿಥೇಯದೊಂದಿಗೆ ನಡೆಯಲಿರುವ ಜಿನಸಮ್ಮಿಲನ ಉತ್ಸವ ಅಂತರಾಷ್ಟ್ರೀಯ ಜಿನಸಮ್ಮಿಲನ 2022ವಾಗಿ ರೂಪುಗೊಂಡಿದೆ. ಡಿಸೆಂಬರ್ ತಿಂಗಳ 3, 4 ರಂದು ಜಿನಸಮ್ಮಿಲನ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ. ಈ ಮಹಾ ಉತ್ಸವದಲ್ಲಿ ದೇಶವಿದೇಶಗಳ ಬಂಧುಗಳು ಭಾಗವಹಿಸಲಿದ್ದಾರೆ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ನಾಡೋಜ ಹಂಪನಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದುಬೈ ಜೈನ್ ಮಿಲನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಂಘಟಿತವಾಗಿದೆ ಹಾಗೂ ಆತ್ಮೀಯ ಸ್ವಾಗತವನ್ನು ಕೋರಿದೆ.
-ನಿರಂಜನ್ ಜೈನ್ ಕುದ್ಯಾಡಿ