ಯೊಸೆಮೈಟ್ ರಾಷ್ಟ್ರೀಯ ಉದ್ಯಾನದ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ಜನರನ್ನು ಸ್ಥಳಾಂತರಿಸಿದ ಬಳಿಕ ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಮಾರಿಪೋಸಾ ಕೌಂಟಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಗವರ್ನರ್ ಕಚೇರಿ ನೀಡಿರುವ ಮಾಹಿತಿಯಲ್ಲಿ, “ಗವರ್ನರ್ ಗೇವಿನ್ ನ್ಯೂಸಮ್ ಇಂದು ಮಾರಿಪೋಸಾ ಕೌಂಟಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಓಕ್ ಕಾಡುಗಳಲ್ಲಿ ಭೀಕರ ಬೆಂಕಿಯಿಂದಾಗಿ ಮನೆಗಳು ಮತ್ತು ಇತರ ನಿರ್ಮಾಣ ಕಟ್ಟಡಗಳು ಅಪಾಯಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಿ ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ, ಓಕ್ ಕಾಡುಗಳಲ್ಲಿನ ಬೆಂಕಿ ಅನಾಹುತ 11 ಸಾವಿರ 500 ಎಕರೆಗೂ ಹೆಚ್ಚು ಪ್ರದೇಶವನ್ನು ಸುಟ್ಟುಹಾಕಿದೆ. ಮಾರಿಪೋಸಾ ಕೌಂಟಿಯ ಮಿಡ್‌ಪೈನ್ಸ್ ಪಟ್ಟಣದ ಬಳಿ ಶುಕ್ರವಾರ ಮಧ್ಯಾಹ್ನದ ಬಳಿಕ ವ್ಯಾಪಕವಾಗಿ ಹರಡಿದೆ.
ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿ ನಿಯಂತ್ರಣ ಇಲಾಖೆ ನೀಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಓಕ್ ಅರಣ್ಯದಲ್ಲಿ ಬೆಂಕಿ 11,900 ಎಕರೆ ಪ್ರದೇಶವನ್ನು ನಾಶಪಡಿಸಿದೆ ಮತ್ತು ಬೆಂಕಿಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ಈ ಭಾರಿ ಬೆಂಕಿಯಿಂದಾಗಿ, ಸ್ಥಳೀಯ ವ್ಯಾಪಾರ ಕೇಂದ್ರಗಳು ಮತ್ತು ಮನೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.