ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಒಟ್ಟು 8 ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಆ 8 ನಿರ್ಣಯಗಳ ಪೈಕಿ 5ನೇ ನಿರ್ಣಯದ ಪ್ರಕಾರ ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜನಗಣತಿ ಅಥವಾ ಜಾತಿ ಗಣತಿ ವೇಳೆ ಸಮಾಜದವರು ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಯಬೇಕು ಎಂಬ ನಿರ್ಣಯವನ್ನೂ ಅಂಗೀಕರಿಸಲಾಗಿದೆ.
ಗಣತಿ ವೇಳೆ ಸಮಾಜದ ಎಲ್ಲ ಸದಸ್ಯರೂ ಧರ್ಮದ ಕಾಲಂನಲ್ಲಿ ಹಿಂದೂ ಎಂಬ ಪದವನ್ನು ಬಳಸಬಾರದು. ಒಳ ಪಂಗಡದ ಹೆಸರನ್ನೂ ಬಳಸಬಾರದು. ವೀರಶೈವ ಅಥವಾ ಲಿಂಗಾಯತ ಎಂದಷ್ಟೇ ಬಳಸಬೇಕು. ಇದರಿಂದ ಸಮಾಜಕ್ಕೆ ಒಳಿತಾಗಲಿದೆ ಮತ್ತು ನಮ್ಮ ನಿರ್ದಿಷ್ಟ ಸಂಖ್ಯೆ ಎಷ್ಟಿದೆ ಎನ್ನುವುದು ಜಗತ್ತಿಗೆ ತಿಳಿಯಲಿದೆ
ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಈ ಮೂಲಕ ವೀರಶೈವ ಲಿಂಗಾಯತರು ಹಿಂದೂಗಳಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನದಲ್ಲಿ ವೀರಶೈವ-ಲಿಂಗಾಯತರು ಘೋಷಿಸಿಕೊಂಡಿದ್ದಾರೆ.
ಯಾಕೆ ಈ ಘೋಷಣೆ ಇಷ್ಟೊಂದು ಮಹತ್ವ ಪಡೆದಿದೆ..?
2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಇದ್ದ ವೇಳೆ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಬೇಕೆಂಬ ಹೋರಾಟ ನಡೆದಿತ್ತು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಆಗ ಸಿದ್ದರಾಮಯ್ಯ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂಬಿ ಪಾಟೀಲ್ ಒಳಗೊಂಡಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮೂಲಕ ಕಾಂಗ್ರೆಸ್ ಹಿಂದೂ ಧರ್ಮವನ್ನು ಒಡೆಯುವ ಯತ್ನ ಮಾಡುತ್ತಿದೆ ಎಂದು ಬಿಜೆಪಿ ಪುಕಾರು ಹಬ್ಬಿಸಿತ್ತು.
ಬಿಜೆಪಿ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದೂ ಕಳಂಕದ ಪಟ್ಟ ಕೊಟ್ಟು ಚುನಾವಣೆಯಲ್ಲಿ ಹಿನ್ನಡೆಗೂ ಕಾರಣವಾದವು.
ಈಗ ವೀರಶೈವ-ಲಿಂಗಾಯತರ ಮಹಾ ಅಧಿವೇಶನದಲ್ಲೇ ತಾವು ವೀರಶೈವ ಲಿಂಗಾಯತ ಧರ್ಮದವರು, ಹಿಂದೂಗಳಲ್ಲ ಎಂದು ಘೋಷಿಸುವ ನಿರ್ಣಯ ಕೈಗೊಳ್ಳಲಾಗಿದೆ.
ವಿಚಿತ್ರ ಎಂದರೆ ಕಟ್ಟರ್ ಹಿಂದೂವಾದಿ ಪಕ್ಷ ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಅವರ ಮಗ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಈ ಸಮಾವೇಶದಲ್ಲಿ ಭಾಗಿಯಾಗಿದ್ದರು.
2017ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ಹಿಂದೂಧರ್ಮ ವಿಭಜನೆಯ ಕುತಂತ್ರ ಎಂದು ಬಿಜೆಪಿ ಬಿಂಬಿಸಿತ್ತು. ಈಗ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅವರ ತಂದೆ ಯಡಿಯೂರಪ್ಪರೇ ನಿರ್ಣಯ ಪರ ಇದ್ದಾರೆ.
ವೀರಶೈವ ಲಿಂಗಾಯತ ಮಹಾಸಭಾದ ಅಧಿಕೃತ ಮಾಹಿತಿಯ ಪ್ರಕಾರ ದೇಶದಲ್ಲಿ 82 ಲಕ್ಷದ 87 ಸಾವಿರದಷ್ಟು ಲಿಂಗಾಯತರಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಲಿಂಗಾಯತರ ಜನಸಂಖ್ಯೆ ಜಾಸ್ತಿ ಇದೆ. 344 ಜಿಲ್ಲೆಗಳಲ್ಲಿ ಲಿಂಗಾಯತರು ಹರಡಿಕೊಂಡಿದ್ದಾರೆ.
ADVERTISEMENT
ADVERTISEMENT