ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆದ ನಾಲ್ಕೇ ತಿಂಗಳಿಗೆ ಈಗ ಮತ್ತೊಂದು ಉಪ ಚುನಾವಣೆ ಬಂದಿದೆ. ಸಮಾಜವಾದಿ ಪಕ್ಷದ ಶಾಸಕ ಅಜಂಖಾನ್ ರಾಜೀನಾಮೆಯಿಂದ ತೆರವಾಗಿರುವ ರಾಂಪುರ ಲೋಕಸಭಾ ಕ್ಷೇತ್ರಕ್ಕೆ ಜೂನ್ 23ನೇ ತಾರೀಕು ಅಂದರೆ ಇದೇ ಗುರುವಾರ ಮತದಾನ ನಡೆಯಲಿದೆ. ಇದೇ ಭಾನುವಾರ ಅಂದರೆ ಜೂನ್ 26ರಂದು ಫಲಿತಾಂಶ ಪ್ರಕಟ ಆಗಲಿದೆ.
2014ರಲ್ಲಿ ಈ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಈ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನಸಮಾಜ ಪಕ್ಷ ಮಹಾಮೈತ್ರಿಕೂಟದಡಿ ಮೈತ್ರಿ ಮಾಡಿಕೊಂಡಿದ್ದರಿAದ ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಗೆದ್ದು ಲೋಕಸಭೆ ಪ್ರವೇಶಿಸಿದ್ದರು.
ರಾಂಪುರ ಲೋಕಸಭಾ ಉಪ ಚುನಾವಣೆಯಲ್ಲಿ ಈಗ ಬಾರಿ ಸಮಾಜವಾದಿ ಪಕ್ಷ ಮತ್ತು ಬಿಜೆಪಿ ನಡುವೆಯೇ ನೇರ ಜಿದ್ದಾಜಿದ್ದಿದೆ. ವಿಚಿತ್ರ ಅಂದ್ರೆ ಈ ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳೂ ಅಜಂಖಾನ್ ಅವರ ಪರಮಾಪ್ತರೇ.
ಅಜಂಖಾನ್ ಅವರ ಆಪ್ತ ಆಸಿಂ ರಾಜಾ ಅವರನ್ನು ಎಸ್ಪಿ ಕಣಕ್ಕಿಳಿಸಿದ್ರೆ ವಿಧಾನಸಭಾ ಚುನಾವಣೆಗೂ ಮೊದಲು ಅಂದರೆ 2022ರಲ್ಲಿ ಬಿಜೆಪಿ ಸೇರಿದ್ದ ಅಜಂ ಆಪ್ತ ಘನಶ್ಯಾಮ ಲೋಧಿಗೆ ಬಿಜೆಪಿ ಟಿಕೆಟ್ ನೀಡಿದೆ. ಹೀಗಾಗಿ ಇದೊಂದು ರೀತಿ ಅಜಂಖಾನ್ ಆಪ್ತರ ನಡುವಿನ ಚುನಾವಣೆ.
ಆದರೆ ಆ ಚುನಾವಣೆಯಲ್ಲಿ ಬಹುಜನಸಮಾಜ ಪಕ್ಷ ಮತ್ತು ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿಲ್ಲ. ಇದು ಅತ್ಯಂತ ಮಹತ್ವದ್ದು. ಕಾರಣ ಏನೆಂದ್ರೆ 2014ರ ಲೋಕಸಭಾ ಚುನಾವಣೆಯಲ್ಲಿ ಚತುಷ್ಕೋನ ಸ್ಪರ್ಧೆ ಆಗಿದ್ದಾಗ ಬಿಜೆಪಿ ಕೇವಲ 23 ಸಾವಿರ ಮತಗಳಿಂದ ಬಿಜೆಪಿ ಗೆದ್ದಿತ್ತು. 2019ರಲ್ಲಿ ತ್ರಿಕೋನ ಸ್ಪರ್ಧೆ ಆದಾಗ ಮಹಾಮೈತ್ರಿಕೂಟದ ಅಭ್ಯರ್ಥಿ ಅಜಂಖಾನ್ 1 ಲಕ್ಷದ 9 ಸಾವಿರ ಮತಗಳಿಂದ ಗೆದ್ದಿದ್ದರು.
ಅಜಂಖಾನ್ ಮೇಲೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ 80 ಕೇಸ್ಗಳನ್ನು ಹಾಕಿದೆ. ಇವರು 27 ತಿಂಗಳು ಅಂದರೆ ಎರಡೂವರೆ ವರ್ಷದಷ್ಟು ಕಾಲ ಜೈಲಿನಲ್ಲಿದ್ದ ಇವರು ಇತ್ತೀಚೆಗೆಷ್ಟೇ ಬಿಡುಗಡೆಯಾಗಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅಜಂಖಾನ್ಗೆ ಅನಿವಾರ್ಯ.
ರಾಂಪುರ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಎಂಟೂವರೆ ಲಕ್ಷ. ಹಿಂದೂ ಮತಗಳ ಸಂಖ್ಯೆ ಎಂಟು ಲಕ್ಷದ 30 ಸಾವಿರ. ಹಿಂದೂ ಮತಗಳಲ್ಲಿ ಒಂದೂಕಾಲು ಲಕ್ಷ ಲೋಧಿ ಸಮುದಾಯದ ಮತಗಳು, 75 ಸಾವಿರ ಕುರ್ಮಿಗಳ ಮತಗಳು, 45 ಸಾವಿರ ಯಾದವ ಮತಗಳು ಸೇರಿವೆ.
ಬಹುಜನ ಸಮಾಜ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವ ಹಿನ್ನೆಲೆಯಲ್ಲಿ ಬಿಎಸ್ಪಿಗೆ ಹೋಗಬಹುದಾದ ದಲಿತ ಮತಗಳು ಬಿಜೆಪಿಗೆ ಹೋಗಬಹುದು ಎಂದು ನಿರೀಕ್ಷಿಸಲಾಗಿದ್ದು, ಬಿಎಸ್ಪಿ ಅಭ್ಯರ್ಥಿಯನ್ನು ಹಾಕದೇ ಇರುವುದಕ್ಕೆ ಇದೂ ಕಾರಣ ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಕದೇ ಇರುವ ಹಿನ್ನೆಲೆಯಲ್ಲಿ ಅದರ ಮತಗಳು ಎಸ್ಪಿಗೆ ಹೋಗಬಹುದು ಎನ್ನಲಾಗಿದೆ. ಆದರೆ 2014ರ ಚುನಾವಣೆಯಲ್ಲಿ 1,56,466 ಮತಗಳನ್ನು ಪಡೆದಿದ್ದ ಕಾಂಗ್ರೆಸ್ 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 35 ಸಾವಿರ ಮತಗಳನ್ನು ಪಡೆದಿತ್ತು. 2019ರಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದರಿAದ ಎಸ್ಪಿಯ ಅಜಂಖಾನ್ ಗೆದ್ದರು ಎನ್ನುವುದು ಗಮನಿಸಬೇಕಾದ ಅಂಶ.