ಮೂಡಬಿದ್ರೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಮೂಡಬಿದ್ರೆ ಕ್ಷೇತ್ರದಲ್ಲಿ ಹೊಸ ರಾಜಕೀಯ ಬೆಳವಣಿಗೆ ನಡೆದಿದೆ.
ಮತ ನೀಡದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಕೆಲಸ ಯಾಕೆ ಮಾಡಿಕೊಡಬೇಕು ಎಂಬ ಅಹಂಕಾರ ಬಿಜೆಪಿ ನಾಯಕರಿಗೆ ಇದೆ
ಎನ್ನುವ ಮೂಲಕ ಪಕ್ಷದ ವಿರುದ್ಧವೇ ಶಾಸಕ ಉಮಾನಾಥ್ ಕೋಟ್ಯಾನ್ ಕಿಡಿಕಾರಿದ್ದಾರೆ.
ನಮ್ಮ ಬಿಜೆಪಿಯವರು ಹೇಳುವುದೇನೆಂದರೆ ಬ್ಯಾರಿಗಳು ಮತ್ತು ಪೊರ್ಬುಗಳು (ಕ್ರಿಶ್ಚಿಯನ್ನರು) ನಮಗೆ ವೋಟ್ ಹಾಕುವುದಿಲ್ಲ, ನಾವು ಯಾಕೆ ಕೆಲಸ ಮಾಡ್ಬೇಕು ಅಂತ. ನಾನು ನೇರ ಮಾತಾಡುವವನು. ನಮ್ಮ ಪಾರ್ಟಿಯವರ ಅಹಂಕಾರ ಏನೆಂದರೆ ನಾವು ಯಾಕೆ ಅವರಿಗೆ ಕೆಲಸ ಮಾಡ್ಬೇಕು. ಆದರೆ ನಾನು ಇದಕ್ಕೆ ವಿರುದ್ಧವಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಮಸೀದಿ, ಚರ್ಚ್ಗಳಿಗೆ ಎಲ್ಲ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಕ್ಷೇತ್ರದ ಮಸೀದಿಗಳಿಗೆ ಮತ್ತು ಚರ್ಚ್ಗಳಿಗೆ 5 ಕೋಟಿ ಬೇಕು ಎಂದು ಮುಖ್ಯಮಂತ್ರಿಗಳ ಬಳಿ ಕೇಳಿದ್ದೇನೆ
ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಅವರು ಹೇಳಿದ್ದಾರೆ.
ಕಿನ್ನಿಗೋಳಿಯಲ್ಲಿ ಶಾಸಕರು ಮಾತಾಡುವ ವೇಳೆ ವೇದಿಕೆಯಲ್ಲಿ ಮುಸಲ್ಮಾನ ಮುಖಂಡರೂ ಇದ್ದರು.
ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್ಗಾಗಿ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಮತ್ತು ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸುದರ್ಶನ್ ಅವರ ನಡುವೆ ಪೈಪೋಟಿ ಇದೆ. ಒಂದು ವೇಳೆ ಕೋಟ್ಯಾನ್ ಅವರಿಗೆ ಬಿಜೆಪಿ ನಿರಾಕರಿಸಿದರೂ ಅಚ್ಚರಿಯಿಲ್ಲ ಎಂಬ ಮಾತು ಕ್ಷೇತ್ರದಲ್ಲಿದೆ.
ಇದರ ನಡುವೆ ಬಿಜೆಪಿ ಶಾಸಕರೇ ಬಿಜೆಪಿ ಪಕ್ಷದ ಮುಸಲ್ಮಾನ ವಿರುದ್ಧದ ನಿಲುವುಗಳನ್ನು ಬಹಿರಂಗವಾಗಿ ಖಂಡಿಸಿರುವುದು ಕರಾವಳಿ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ADVERTISEMENT
ADVERTISEMENT