ವಿಧಾನಸಭಾ ಚುನಾವಣೆಗೆ 11 ತಿಂಗಳು ಬಾಕಿ ಇರುವಂತೆ ಕಾರ್ಕಳದಲ್ಲಿ ಕಾಂಗ್ರೆಸ್ ದೊಡ್ಡ ಆಘಾತ ಆಗಿದೆ. ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.
ಈ ಹಿಂದೆ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದ ಮುನಿಯಾಲು ಅವರು ಈ ಪಕ್ಷ ಸಂಘಟನೆಯಲ್ಲಿ ವರಿಷ್ಠರಿಗೆ ಇರುವ ನಿರಾಸಕ್ತಿ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಗುತ್ತಿಗೆದಾರರಾಗಿರುವ ಉದಯ್ ಕುಮಾರ್ ಶೆಟ್ಟಿ ಅವರು 2018ರಲ್ಲಿ ಕಾಂಗ್ರೆಸ್ ಟಿಕೆಟ್ಗೆ ಪೈಪೋಟಿ ನಡೆಸಿದ್ದರು. ಆದರೆ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ತಮ್ಮ ಪುತ್ರ ಹರ್ಷ ಮೊಯ್ಲಿಗೆ ಟಿಕೆಟ್ ಕೊಡಿಸುವ ಪ್ರಯತ್ನವನ್ನೂ ಮಾಡಿದ್ದರು. ಅಲ್ಲದೇ ಸಚಿವರ ಆಪ್ತ ಗುತ್ತಿಗೆದಾರರಿಗೆ ಟಿಕೆಟ್ ಹಂಚಿಕೆ ಮಾಡಲಾಗ್ತಿದೆ ಎಂದು ಹರ್ಷ ಮೊಯ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಿನ ಲೋಕೋಪಯೋಗಿ ಸಚಿವ ಹೆಚ್ ಸಿ ಮಹಾದೇವಪ್ಪ ವಿರುದ್ಧ ಬಹಿರಂಗ ಆರೋಪ ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ಮೊಯ್ಲಿ ಪುತ್ರ ಹರ್ಷ ಮೊಯ್ಲಿ ತಮ್ಮ ಈ ಟ್ವೀಟ್ ಆ ಬಳಿಕ ಸಮಾಜಾಯಿಷಿಯನ್ನೂ ಕೊಟ್ಟಿದ್ದರು.
ಇತ್ತ ಮುನಿಯಾಲು ಅವರಿಗೆ ಟಿಕೆಟ್ ತಪ್ಪಿದ್ದರಿಂದ ಆಕ್ರೋಶಗೊಂಡಿದ್ದ ಬೆಂಬಲಿಗರುವ ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ ಅಣುಕು ಶವಯಾತ್ರೆ ಮಾಡಿದ್ದರು. ಕಡೆಗೆ ಗೋಪಾಲ ಭಂಡಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಕಾರ್ಕಳದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿತು.
ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿರುವ ಉದಯ್ ಕುಮಾರ್ ಶೆಟ್ಟಿ ಅವರಿಗೆ ಬಿಜೆಪಿಯಿಂದಲೂ ಆಹ್ವಾನ ಇದೆ ಎನ್ನಲಾಗಿದ್ದು, ಆದರೆ ಅವರು ಬಿಜೆಪಿಗೆ ಹೋಗುವ ಸಾಧ್ಯತೆ ಇಲ್ಲ ಎನ್ನಲಾಗ್ತಿದೆ.