Explainer: ಏಕರೂಪ ನಾಗರಿಕ ಸಂಹಿತೆಯಿಂದ ಏನು ಬಯಸ್ತಿದೆ ಬಿಜೆಪಿ?

ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಗೆಲ್ಲುವ ದೃಷ್ಟಿಯಿಂದ ಬಿಜೆಪಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ಮಾಡಲು ಮುಂದಾಗಿದೆ. ಇದು ರಾಷ್ಟ್ರ ರಾಜಕೀಯ ಕಾವೇರಲು ಕಾರಣವಾಗಿದೆ.

ಅಂದ ಹಾಗೆ, ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾಪ ಹೊಸದೇನು ಅಲ್ಲ. 1967ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಅಂದಿನ ಜನಸಂಘ ಈ ಬಗ್ಗೆ ಪ್ರಸ್ತಾಪ ಮಾಡಿತ್ತು. 

ನಾವು ಅಧಿಕಾರಕ್ಕೆ ಬಂದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುತ್ತೇವೆ ಎಂದು ಜನಸಂಘ ಸ್ಪಷ್ಟವಾಗಿ ಹೇಳಿತ್ತು. ಆದರೆ, ಜನ ಇದಕ್ಕೆ ಮಣೆ ಹಾಕಲಿಲ್ಲ. ಆಗ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತ್ತು ಕಾಂಗ್ರೆಸ್.

ನಂತರದ ದಿನಗಳಲ್ಲಿ ಕಾಂಗ್ರೆಸ್ ವಿಭಜನೆ, ಭಾರತ-ಚೀನಾ ಯುದ್ಧ, ತುರ್ತು ಪರಿಸ್ಥಿತಿಯಂತಹ ಸರಣಿ ಘಟನೆಗಳ ನಡುವೆ ಏಕರೂಪ ನಾಗರಿಕ ಸಂಹಿತೆ ಘೋಷಣೆ ಮರೆಯಾಗಿತ್ತು.

1980ರಲ್ಲಿ ಬಿಜೆಪಿ ಉದಯವಾದ ನಂತರ ಮತ್ತೆ ಯುಸಿಸಿ ಡಿಮ್ಯಾಂಡ್ ಶುರುವಾಯಿತು. ಆಗಿನಿಂದಲೂ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದು, ಯುಸಿಸಿ ಭರವಸೆಗಳು ಪ್ರಧಾನವಾಗಿ ಕಾಣಿಸಿಕೊಳ್ಳಲಾರಂಭಿಸಿದವು.

ಆದರೆ, ಈವರೆಗೂ ಯುಸಿಸಿ ಜಾರಿ ಮಾಡುವ ನಿಟ್ಟಿನಲ್ಲಿ ಬಿಜೆಪಿಯ ಯಾವ ಸರ್ಕಾರವೂ ಪ್ರಯತ್ನಿಸಲಿಲ್ಲ. ನರೇಂದ್ರ ಮೋದಿಯ ಮೊದಲ ಅವಧಿಯ ಆಡಳಿತವೂ ಸೇರಿದಂತೆ..

ಆದರೂ, ಆಗಾಗ ಬಿಜೆಪಿ ನಾಯಕರ ಬಾಯಲ್ಲಿ ಯುಸಿಸಿ ಪ್ರಸ್ತಾಪವಾಗುತ್ತಲೇ ಇತ್ತು. ನಿನ್ನೆ ಮೊನ್ನೆಯವರೆಗೂ ಈ ಬಗ್ಗೆ ಪ್ರಧಾನಿ ಮೋದಿ ಎಲ್ಲಿಯೂ ಪ್ರಸ್ತಾಪ ಮಾಡಿಲಿಲ್ಲ. ಆದರೆ, ಜೂನ್ 27ರಂದು ಪ್ರಧಾನಮಂತ್ರಿ ಮೊದಲ ಬಾರಿಗೆ ಈ ವಿಚಾರವಾಗಿ ಸುದೀರ್ಘವಾಗಿ ಮಾತನಾಡಿದರು.

ಪ್ರಧಾನಿ ಮೋದಿ ಏನಂದ್ರು?
ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು.

ಒಂದೇ ಕುಟುಂಬದ ಇಬ್ಬರಿಗೆ ಎರಡು ಕಾನೂನುಗಳು ಅನ್ವಯ ಆಗಬಾರದು. ಅಸಲಿಗೆ ಒಂದೇ ಮನೆಯಲ್ಲಿ ಎರಡು ವಿಧಾನ ಹೇಗೆ

ಎಂದು ಪ್ರಶ್ನೆ ಮಾಡಿದರು.

ಸುಪ್ರೀಂಕೋರ್ಟ್ ಪದೇ ಪದೇ ಹೇಳುತ್ತೆ.. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವಂತೆ ಸೂಚಿಸುತ್ತೆ. ಆದರೆ, ವೋಟ್  ಬ್ಯಾಂಕ್ ರಾಜಕೀಯ ಮಾಡುತ್ತಿರುವ ಕೆಲವರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಆದರೆ, ಬಿಜೆಪಿ ಎಲ್ಲರದ್ದು.. ಎಲ್ಲರ ಅಭಿವೃದ್ಧಿಗಾಗಿ ಮೊದಲಿನಿಂದಲೂ ಕಷ್ಟಪಡುತ್ತಿದೆ 

ಎಂದು ಮೋದಿ ವಿವರಿಸಿದ್ದರು.

ಮೋದಿ ಹೇಳಿಕೆ ನಂತರ ಕೆಲ ವಿರೋಧ ಪಕ್ಷಗಳು ಟೀಕೆ ಮಾಡಲಾರಂಭಿಸಿದವು. ಬೇಕಂತಲೇ 2024 ಚುನಾವಣೆಗೆ ಮೊದಲು ನಿರುದ್ಯೋಗ, ದರ ಹೆಚ್ಚಳದಂತಹ ಅಂಶಗಳನ್ನು ಜನರಿಂದ ಮರೆ ಮಾಚಲು ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಆರೋಪ ಮಾಡಿದವು. ಆದರೆ, ಕೆಲ ಪಕ್ಷಗಳು ಯುಸಿಸಿಯನ್ನು ಬೆಂಬಲಿಸುತ್ತಿವೆ ಎನ್ನುವುದು ವಾಸ್ತವ.

ಕೆಲವರ ಬೆಂಬಲ.. ಮತ್ತೆ ಕೆಲವರ ವಿರೋಧ..
ಬಹುತೇಕ ವಿರೋಧ ಪಕ್ಷಗಳು ಯುಸಿಸಿಗೆ ವಿರುದ್ಧವಾಗಿವೆ.

ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಇದು ಭಂಗ ಉಂಟು ಮಾಡಿದಂತೆ ಆಗುತ್ತದೆ. ಅಸಲಿಗೆ ಈಗ ಯುಸಿಸಿ ಅಗತ್ಯವೇ ಇಲ್ಲ. ವೈಯಕ್ತಿಕ ಕಾನೂನುಗಳು ಚನ್ನಾಗಿಯೇ ಕೆಲಸ ಮಾಡುತ್ತಿವೆ

ಎನ್ನುವುದು ಇವರ ಅಭಿಪ್ರಾಯ.

ದೇಶದ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತ ಹಿಂದೂಗಳ ವಿಧಾನಗಳನ್ನು ಯುಸಿಸಿ ಮೂಲಕ ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆ

ಎನ್ನುವುದು ವಿರೋಧ ಪಕ್ಷಗಳ ಆರೋಪವಾಗಿದೆ.

ಕಾಂಗ್ರೆಸ್, ಟಿಎಂಸಿ, ಜೆಡಿಯು, ಸಿಪಿಐ, ಆರ್‌ಜೆಡಿ, ಸಮಾಜವಾದಿ ಪಕ್ಷ, ಸಿಪಿಎಂ ಸೇರಿ ಹಲವು ಪಕ್ಷಗಳನ್ನು ಯುಸಿಸಿಯನ್ನು ಬಹಿರಂಗವಾಗಿಯೇ ವಿರೋಧಿಸುತ್ತಿವೆ.

ಇದೇ ಸಂದರ್ಭದಲ್ಲಿ ಎಎಪಿ ಯುಸಿಸಿಗೆ ಷರತ್ತುಬದ್ಧ ಬೆಂಬಲ ಘೋಷಿಸಿದೆ.

ಸಂವಿಧಾನದ 44ನೇ ವಿಧಿ ಕೂಡ ಇದನ್ನು ಬೆಂಬಲಿಸುತ್ತದೆ. ಆದರೆ, ಇದು ಎಲ್ಲಾ ಧರ್ಮಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರ. ಹೀಗಾಗಿ ಎಲ್ಲರ ಒಪ್ಪಿಗೆಯ ಮೇರೆಗೆ ಇದನ್ನು ಜಾರಿ ಮಾಡಬೇಕು

ಎಂದು ಆಮ್‌ಆದ್ಮಿ ಪಕ್ಷ ಹೇಳುತ್ತಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಕೂಡ ಹೆಚ್ಚುಕಡಿಮೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಯುಸಿಸಿಯನ್ನು ಬಿಎಸ್​ಪಿಯ ಮಾಯಾವತಿ ಕೂಡ ಸಮರ್ಥಿಸಿದ್ದಾರೆ. ಆದರೆ, ಜಾರಿ ವಿಚಾರದಲ್ಲಿ ಬಿಜೆಪಿಯ ಧೋರಣೆ ಸರಿ ಇಲ್ಲ ಎನ್ನುತ್ತಾರೆ.

ಎನ್‌ಸಿಪಿ ಮಾತ್ರ ಈ ಬಗ್ಗೆ ತಟಸ್ಥ ಧೋರಣೆ ತಳೆದಿದೆ. ವಿರೋಧಿಸುತ್ತಲೂ ಇಲ್ಲ.. ಸ್ವಾಗತಿಸುತ್ತಲೂ ಇಲ್ಲ. ಆದರೆ, ಇಂತಹ ದೊಡ್ಡ ನಿರ್ಣಯಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬಾರದು. ಎಲೆಕ್ಷನ್ ಸನಿಹದಲ್ಲಿ ಮೋದಿ ಸರ್ಕಾರಕ್ಕೆ ಯುಸಿಸಿ ನೆನಪಾಗಿದೆ ಎಂದು ಎನ್‌ಸಿಪಿ ನಾಯಕರು ಹೇಳುತ್ತಾರೆ.

ಪ್ರಧಾನಿ ಮೋದಿ ಈಗೇಕೆ ಮಾತನಾಡುತ್ತಿದ್ದಾರೆ?
ಈ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಯುಸಿಸಿ ಈಸ್ ಮೋದಿಸ್ ನ್ಯೂಕ್ಲಿಯರ್ ಬಟನ್ ಹೆಸರಿನಲ್ಲಿ ದಿ ಪ್ರಿಂಟ್‌ನಲ್ಲಿ ಹಿರಿಯ ಪತ್ರಕರ್ತ ವೀರ್ ಸಾಂಘ್ವಿ ಒಂದು ಲೇಖನ ಬರೆದಿದ್ದಾರೆ.

ಒಂಬತ್ತು ವರ್ಷಗಳ ಆಡಳಿತದ ನಂತರ ಮೋದಿ ಇದೀಗ ಯುಸಿಸಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಕಳೆದ 9 ವರ್ಷಗಳಲ್ಲಿ ಚರ್ಚೆಗಳನ್ನು ನಡೆಸಿ ಮುಸ್ಲಿಮರಿಗೆ ಒಂದು ಭರವಸೆಯನ್ನು ನೀಡಬಹುದಿತ್ತು. ಈ ಕಾಯ್ದೆಯಿಂದ ಯಾವುದೇ ಧರ್ಮಕ್ಕೆ ಕಂಟಕವಿಲ್ಲ ಎಂದು ಹೇಳಬಹುದಿತ್ತು. ಆದರೆ, ಮೋದಿ ಹಾಗೆ ಮಾಡಲಿಲ್ಲ ಎಂದು ವೀರ್ ಸಾಂಘ್ವಿ ಹೇಳುತ್ತಾರೆ.

ಈ ಪ್ರಶ್ನೆಗೆ ಸಮಾಧಾನ ಒಂದೇ..

2024ರ ಚುನಾವಣೆಗೆ ಸನ್ನದ್ಧವಾಗುವ ದೃಷ್ಟಿಯಿಂದಲೇ ಮೋದಿ ಸರ್ಕಾರ ಈಗ ಯುಸಿಸಿ ವಿಚಾರವನ್ನು ಪ್ರಸ್ತಾಪಿಸಿದೆ. ಯುಸಿಸಿ ಮೂಲಕ ಮೋದಿ ಸರ್ಕಾರ ಹಿಂದುತ್ವಕ್ಕೆ ಆದ್ಯತೆ ನೀಡಿದೆ ಎಂಬ ಸಂದೇಶ ರವಾನೆ ಆಗುವಂತೆ ನೋಡಿಕೊಳ್ಳುವುದು ಬಿಜೆಪಿಯ ಅಜೆಂಡಾ ಆಗಿದೆ. ಯುಸಿಸಿ ಎನ್ನುವುದು ಮೋದಿ ಪಾಲಿಗೆ ನ್ಯೂಕ್ಲಿಯರ್ ಬಟನ್

ಎಂದು ವೀರ್ ಸಾಂಘ್ವಿ ವಿಶ್ಲೇಷಣೆ ಮಾಡುತ್ತಾರೆ.

ಬಿಜೆಪಿಯ ಪ್ರಮುಖ ಮೂರು ಅಜೆಂಡಾಗಳ ಪೈಕಿ ಆರ್ಟಿಕಲ್ 370 ರದ್ದಾಗಿದೆ. ರಾಮಮಂದಿರ ನಿರ್ಮಾಣದ ಕೆಲಸ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಉಳಿದಿರೋದು ಯುಸಿಸಿ ಮಾತ್ರ. ಇದನ್ನು ಯಾವ್ಯಾವ್ಯಾಗ ಜಾರಿ ಮಾಡುತ್ತಾರೆ ಎಂದು ಬಿಜೆಪಿ ಬೆಂಬಲಿಗರು ಎದಿರು ನೋಡುತ್ತಿದ್ದಾರೆ. ಹೀಗಾಗಿಯೇ ಇದೇನು ಅವರಿಗೆ ಹೊಸ ವಿಚಾರವಲ್ಲ.

ಈಗಾಗಲೇ ರಾಮಮಂದಿರ ರದ್ದು, ಆರ್ಟಿಕಲ್ 370 ರದ್ದು ಅಂಶಗಳನ್ನು ಬಿಜೆಪಿ ಚುನಾವಣಾ ಸರಕಾಗಿ ಬಳಸಿಕೊಂಡಿದೆ. ಈಗ ಯುಸಿಸಿಯೊಂದೇ ಉಳಿದಿದೆ. ಕರ್ನಾಟಕ ಚುನಾವಣೆಯ ಸೋಲಿನ ನಂತರ ಬಿಜೆಪಿ ಮತ್ತೊಮ್ಮೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಮತ್ತೊಂದ್ಕಡೆ ಮೂರು ರಾಜ್ಯಗಳ ಚುನಾವಣೆ ಜೊತೆಗೆ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಅದಕ್ಕೆ ಬಿಜೆಪಿ ಯುಸಿಸಿ ಜಪ ಶುರು ಮಾಡಿದೆ.

ಜೂನ್ 23ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮಹಾ ಮೈತ್ರಿ ಸಭೆ ನಡೆದಿತ್ತು. ಎಲ್ಲಾ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ನಡೆಸಿದವು. ಆದರೆ, ಯುಸಿಸಿ ವಿಚಾರದ ಬಗ್ಗೆ ಚರ್ಚೆ ನಡೆಸಿರಲಿಲ್ಲ. ಹೀಗಾಗಿಯೇ ವಿರೋಧ ಪಕ್ಷಗಳಿಗಿಂತ ಮೊದಲೇ ಮೋದಿ ಯುಸಿಸಿ ಎಂಬ ಅಜೆಂಡಾವನ್ನು ಮುನ್ನೆಲೆಗೆ ತಂದಿದ್ದಾರೆ. ಈ ಕುರಿತಾಗಿ ಜುಲೈ 13-14ರ ಬೆಂಗಳೂರು ಸಭೆಯಲ್ಲಿ ಚರ್ಚೆ ಮಾಡುವ ಮುನ್ಸೂಚನೆಯನ್ನು ಕಾಂಗ್ರೆಸ್ ಈಗಾಗಲೇ ನೀಡಿದೆ. ಅಂದರೆ, ಇವರು ಮೋದಿ ಶುರು ಮಾಡಿದ ಚರ್ಚೆಗೆ ಸ್ಪಂದಿಸತೊಡಗಿದ್ದಾರೆ. ಇದು ಹೀಗೆಯೇ ಮುಂದುವರೆಯಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಬಿಜೆಪಿ ಹೇಳೋದೇನು?
ಒಂದು ದೇಶ, ಒಂದು ಸಂವಿಧಾನ, ಒಂದೇ ಗುರುತಿನ ಬಗ್ಗೆ ನಮ್ಮ ಪಕ್ಷ ಮೊದಲಿನಿಂದಲೂ ಪ್ರಸ್ತಾಪಿಸುತ್ತಲೇ ಬಂದಿದೆ. ಭಾರತೀಯ ಶಿಕ್ಷಾ ಸ್ಮೃತಿ ಎಲ್ಲರಿಗೂ ಒಂದೇ ಆಗಿರುವಾಗ ನಾಗರಿಕ ಸಂಹಿತೆ ವಿಚಾರದಲ್ಲಿ ಏಕೆ ಭಿನ್ನ ವಾದ ಎಂದು ಬಿಜೆಪಿ ವಕ್ತಾರ ಅಮಿತಾಬ್ ಸಿನ್ಹಾ ಪ್ರಶ್ನೆ ಮಾಡುತ್ತಾರೆ.

 ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡುತ್ತಾ,

ಮೊದಲು ಮುಸ್ಲಿಮರಲ್ಲಿ ಭೀತಿ ಹುಟ್ಟಿಸಿದ್ದವರು ಇದೀಗ ಅವರನ್ನು ಓಲೈಸುವ ರಾಜಕೀಯ ಮಾಡುತ್ತಿದ್ದಾರೆ. ಮುಸ್ಲಿಮ್ ಮಹಿಳೆಯರ ಪರಿಸ್ಥಿತಿ ದಿನದಿಂದ ದಯನೀಯವಾಗುತ್ತಿದೆ. ಅವರನ್ನು ಮಕ್ಕಳನ್ನು ಹುಟ್ಟಿಸುವ ಯಂತ್ರ ಮಾಡಿಕೊಂಡಿದ್ದಾರೆ. ಮುಸ್ಲಿಮರು ನಾಲ್ಕರಿಂದ ಐದು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬ ಪತ್ನಿ ಮೂಲಕ ಐದಾರು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ. ಪರಿಣಾಮ ಮುಸ್ಲಿಮರ ಜನಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಮುಸ್ಲಿಮರ ಜನಸಂಖ್ಯೆ 3 ಕೋಟು. ಆದರೆ, ಈಗೆಷ್ಟಾಗಿದೆ ನೋಡಿ. ಮುಸ್ಲಿಮ್ ಮಹಿಳೆಯರಿಗೆ ಇದರಿಂದ ವಿಮುಕ್ತಿ ಕಲ್ಪಿಸಬೇಕು

ಎನ್ನುತ್ತಾರೆ ಅಮಿತಾಬ್ ಸಿನ್ಹಾ.

ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆಯಾ?
ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವುದು ನಿಜ. ಆದರೆ, ದೇಶದಲ್ಲಿ ಇತರೆ ಧರ್ಮೀಯರ ಜನಸಂಖ್ಯೆ ಕೂಡ ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು. ಆದರೆ, ಕಳೆದ ಕೆಲವು ದಶಕಗಳಿಂದ ಮುಸ್ಲಿಮರ ಜನಸಂಖ್ಯೆಯನ್ನು ಗಮನಿಸಿದಲ್ಲಿ, ಮುಖ್ಯವಾಗಿ 1991ರ ನಂತರ ಮುಸ್ಲಿಮರ ಜನಸಂಖ್ಯೆ ದರ ಇಳಿದಿರುವುದು ಗೊತ್ತಾಗುತ್ತದೆ.

2019ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ಧಾರ್ಮಿಕ ದೃಷ್ಟಿಯಿಂದ ನೋಡಿದಲ್ಲಿ ಮುಸ್ಲಿಮರಲ್ಲಿ ಜನನ ಪ್ರಮಾಣ ಹೆಚ್ಚಾಗಿದೆ. ಆದರೆ, ಕಳೆದ ಎರಡು ದಶಕಗಳಿಗೆ ಹೋಲಿಸಿದಲ್ಲಿ ಈಗ ತುಂಬಾ ಕಡಿಮೆ ಆಗಿದೆ.
1992ರಲ್ಲಿ ಸಗಟು ಮುಸ್ಲಿಮರಲ್ಲಿ ಒಬ್ಬೊಬ್ಬ ಮಹಿಳೆ ಶೇಕಡಾ 4.4 ಮಕ್ಕಳಿಗೆ ಜನ್ಮ ನೀಡಿದರೇ 2019ರಲ್ಲಿ ಇದರ ಪ್ರಮಾಣ 2.4ಕ್ಕೆ ಕುಸಿದಿದೆ.

ಯಾವ ದೇಶಗಳಲ್ಲಿ ಯುಸಿಸಿ ಜಾರಿಯಲ್ಲಿದೆ?
ಅಭಿವೃದ್ಧಿ ಹೊಂದಿದ ಧನಿಕ ದೇಶಗಳಲ್ಲಿ ಯುಸಿಸಿ ಜಾರಿಯಲ್ಲಿದೆ.

ಅಮೆರಿಕಾ, ಇಸ್ರೇಲ್, ಜಪಾನ್, ಫ್ರಾನ್ಸ್, ರಷ್ಯಾ, ಬ್ರಿಟನ್ ಜೊತೆ ಯುರೋಪ್‌ನ ತುಂಬಾ ದೇಶಗಳಲ್ಲಿ ಯುಸಿಸಿ ಜಾರಿಯಲ್ಲಿದೆ.