ಲೋಕಸಭೆ ಕಲಾಪದ ವೇಳೆ ಅಶಿಸ್ತು ತೋರಿದ್ದಕ್ಕಾಗಿ ಡಿ.ಕೆ ಸುರೇಶ್ ಸೇರಿದಂತೆ ಮೂವರು ಕಾಂಗ್ರೆಸ್ ಸಂಸದರನ್ನು ಕಲಾಪದಿಂದ ಅಮಾನತುಗೊಳಿಸಲಾಗಿದೆ.
ಈ ಬಾರಿ ಸಂಸತ್ ಭದ್ರತಾಲೋಪದ ನಂತರದಲ್ಲಾದ ಬೆಳವಣಿಗೆ ಇಡೀ ರಾಷ್ಟ್ರ ರಾಜಕಾರಣವನ್ನೇ ಟೀಕೆ ಮಾಡುವಂತಿದೆ.
ಸಂಸತ್ ನಲ್ಲಿ ಗದ್ದಲ ಸೃಷ್ಟಿಸಿ ಕಲಾಪದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಹಾಗೂ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂಸದರನ್ನು ಅಮಾನತುಗೊಳಿಸಿದ್ರು. ಸದ್ಯ ಅಮಾನತುಗೊಂಡ ಸಂಸದರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಇಂದಿನ ಕಲಾಪದಲ್ಲಿ ಸಚಿವ ಪ್ರಹ್ಲಾದ್ ಜೋಶಿಯವರು ಸಂಸದ ಡಿ.ಕೆ ಸುರೇಶ್, ದೀಪಕ್ ಬೈಜ್ ಮತ್ತು ನಕುಲ್ ನಾಥ್ ಅವರನ್ನು ಅಮಾನತುಗೊಳಿಸುವ ನಿರ್ಣಯ ಮಂಡಿಸಿದ್ರು. ಈ ಮೂವರೂ ಸಂಸದರು ಸದನದ ಬಾವಿಗಿಳಿದು ಸಂಸತ್ ಭದ್ರತಾಲೋಪದ ಕುರಿತಾಗಿ ಚರ್ಚೆಯಾಗಬೇಕು ಮತ್ತು ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಸಭಾಧ್ಯಕ್ಷರ ಮನವೊಲಿಕೆಯ ಯತ್ನವೂ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಓಂ ಬಿರ್ಲಾ ಈ ಮೂವರನ್ನೂ ಕಲಾಪದಿಂದ ಅಮಾನತುಗೊಳಿಸಿದ್ರು.
ಅಮಾನತುಗೊಂಡ ಸಂಸದರ ಪ್ರತಿಭಟನೆ
ಈ ವಾರ ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಮಾನತುಗೊಂಡ ವಿರೋಧ ಪಕ್ಷದ ಸಂಸದರು ಗುರುವಾರ ಬೆಳಗ್ಗೆ ಹಳೆಯ ಸಂಸತ್ ಕಟ್ಟಡದಿಂದ ಕೇಂದ್ರ ದೆಹಲಿಯ ವಿಜಯ್ ಚೌಕ್ ವರೆಗೆ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಹುತೇಕ ವಿರೋಧ ಪಕ್ಷಗಳ ಸಂಸದರನ್ನು ಹೊರಹಾಕಿ 3 ಹೊಸ ಕ್ರಿಮಿನಲ್ ಕಾನೂನುಗಳನ್ನು ಅಂಗೀಕರಿಸಿದ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಅಂತ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು