34,614 ಕೋಟಿ ರೂ. ಗಳ ಭಾರತದ ಇದುವರೆಗಿನ ಅತಿ ದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣ ಪತ್ತೆಯಾಗಿದೆ. ವಂಚನೆ ಎಸಗಿದ ಡಿಎಚ್ಎಫ್ಎಲ್ ಸಂಸ್ಥೆ ಮತ್ತು ಅದರ ಪ್ರವರ್ತಕರಾದ ಕಪಿಲ್ ವಾಧವನ್, ಧೀರಜ್ ವಾಧವನ್, ಉದ್ಯಮಿ ಸುಧಾಕರ ಶೆಟ್ಟಿ ಮತ್ತು ಇತರರ ಮೇಲೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಪ್ರಕರಣ ದಾಖಲಿಸಲಿದೆ. ಮಹಾರಾಷ್ಟ್ರದ 12 ಸ್ಥಳಗಳಲ್ಲಿ ಸಿಬಿಐ ಶೋಧ ಆರಂಭಿಸಿದೆ.
ನೀರವ್ ಮೋದಿ ಪ್ರಕರಣದ ಮೂರು ಪಟ್ಟು ಹೆಚ್ಚು ಬ್ಯಾಂಕಿಂಗ್ ವಂಚನೆ ಇದಾಗಿದ್ದು, ದೇಶ ಕಂಡ ಬೃಹತ್ ಬ್ಯಾಂಕಿಂಗ್ ವಂಚನೆ ಎಂದು ಹೇಳಲಾಗಿದೆ.
ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಎಚ್ಎಫ್ಎಲ್)ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕಪಿಲ್ ವಾಧವನ್, ನಿರ್ದೇಶಕರಾಗಿದ್ದ ಧೀರಜ್ ವಾಧವನ್, ಉದ್ಯಮಿ ಸುಧಾಕರ ಶೆಟ್ಟಿ ಮತ್ತು ಇತರ ಆರೋಪಿಗಳು ಯೂನಿಯನ್ ಬ್ಯಾಂಕ್ ನೇತೃತ್ವದ 17 ಬ್ಯಾಂಕ್ಗಳ ಒಕ್ಕೂಟಕ್ಕೆ ವಂಚಿಸಲು ಕ್ರಿಮಿನಲ್ ಸಂಚು ರೂಪಿಸಿದ್ದರು ಎಂದು ಎಫ್ಐಆರ್ ದಾಖಲಿಸಲಾಗಿದೆ.
ಡಿಎಚ್ಎಫ್ಎಲ್ ಸಂಸ್ಥೆಯ ನಕಲಿ ದಾಖಲೆಗಳ ನೆರವಿನಿಂದ ದೊಡ್ಡ ಮೊತ್ತದ ಸಾಲವನ್ನು ಯೂನಿಯನ್ ಬ್ಯಾಂಕ್ ನೇತೃತ್ವದ 17 ಬ್ಯಾಂಕ್ಗಳ ಒಕ್ಕೂಟದಿಂದ ಪಡೆದುಕೊಂಡರು. ಬಳಿಕ ಈ ಬ್ಯಾಂಕ್ಗಳಿಗೆ ಮೊತ್ತವನ್ನು ಮರುಪಾವತಿ ಮಾಡದೆ ವಂಚಿಸಿದ್ದಾರೆ. ಇದರಿಂದಾಗಿ ಬ್ಯಾಂಕ್ಗಳಿಗೆ 34,615 ಕೋಟಿ ರೂ.ನಷ್ಟು ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ಸಿಬಿಐ ಎಫ್ಐಆರ್ನಲ್ಲಿ ಹೇಳಿದೆ.
ಡಿಎಚ್ಎಫ್ಎಲ್, ಕಪಿಲ್ ವಾಧವನ್, ಧೀರಜ್ ವಾಧವನ್, ಸ್ಕೈಲಾಕ್ ಬಿಲ್ಡ್ಕಾನ್ ಪ್ರೈ.ಲಿ., ದರ್ಶನ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಸಿಗಿಟಿಯಾ ಕನ್ಸ್ಟ್ರಕ್ಷನ್ ಬಿಲ್ಡರ್ಸ್ ಪ್ರೈ ಲಿ., ಟೌನ್ಷಿಪ್ ಡೆವಲಪರ್ಸ್ಸ್ ಪ್ರೈ. ಲಿ., ಶಿಶಿರ್ ರಿಯಾಲ್ಟಿ ಪ್ರೈ. ಲಿ., ಸನ್ಬ್ಲಿಕ್ ರಿಯಲ್ ಎಸ್ಟೇಟ್ ಪ್ರೈ. ಲಿ., ಸುಧಾಕರ್ ಶೆಟ್ಟಿ ಮತ್ತು ಇತರರನ್ನು ಪ್ರಕರಣದಲ್ಲಿ ಸಿಬಿಐಯು ಆರೋಪಿಗಳೆಂದು ಹೇಳಿದೆ.
ಈ ವಾಧವನ್ ಸಹೋದರರ ಮೇಲಿನ ಬ್ಯಾಂಕಿಂಗ್ ವಂಚನೆ ಆರೋಪ ಇದೇ ಮೊದಲಲ್ಲ. ಯೆಸ್ ಬ್ಯಾಂಕ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿಯೂ ಇವರಿಬ್ಬರ ಮೇಲೆ ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿದೆ.