ಪಂಜಾಬ್ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಜಗ್ರೂಪ್ ಸಿಂಗ್ ಅವರನ್ನು ಬಂಧಿಸಲು ಪೊಲೀಸರ ತಂಡ ತೆರಳಿತ್ತು. ಈ ವೇಳೆ ಪಂಜಾಬ್ ಪೊಲೀಸರ ಆಂಟಿ-ಗ್ಯಾಂಗ್ಸ್ಟರ್ ಟಾಸ್ಕ್ ಫೋರ್ಸ್ ಮತ್ತು ಆರೋಪಿಗಳ ಗುಂಪಿನಿಂದ ಪರಸ್ಪರ ಗುಂಡಿನ ಚಕಮಕಿ ನಡೆದಿದೆ.
ಈ ಗುಂಡಿನ ಚಕಮಕಿಯಲ್ಲಿ ಪ್ರಮುಖ ಆರೋಪಿ ಜಗ್ರೂಪ್ ಸಿಂಗ್ ಸೇರಿದಂತೆ 4 ಜನರನ್ನು ಪಂಜಾಬ್ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ.
ಅಮೃತಸರದಿಂದ 20 ಕಿಮೀ ದೂರದಲ್ಲಿರುವ ಭಕ್ನಾ ಗ್ರಾಮದಲ್ಲಿ ಪಂಜಾಬ್ ಪೊಲೀಸರ ಆಂಟಿ-ಗ್ಯಾಂಗ್ಸ್ಟರ್ ಟಾಸ್ಕ್ ಫೋರ್ಸ್, ಜಗ್ರೂಪ್ ಸಿಂಗ್ ರೂಪ ಮತ್ತು ಮನ್ಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕುಸ್ಸಾ ಎಂಬ ಇಬ್ಬರು ವ್ಯಕ್ತಿಗಳನ್ನು ಹಿಂಬಾಲಿಸುತ್ತಿದ್ದಾಗ ಎನ್ಕೌಂಟರ್ ಆರಂಭವಾಗಿದೆ.
ಮೇ 29 ರಂದು ಎಕೆ-47 ರೈಫಲ್ನಿಂದ ಮೂಸೆ ವಾಲಾರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕನಿಷ್ಠ ಎಂಟು ಶೂಟರ್ಗಳಿದ್ದು ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಗಾಯಕ-ಗೀತರಚನೆಕಾರ ಮತ್ತು ರ್ಯಾಪರ್ ಆಗಿದ್ದಲ್ಲದೆ ಕಾಂಗ್ರೆಸ್ ನಾಯಕರಾಗಿದ್ದ 28 ವರ್ಷದ ಸಿಧು ಮೂಸೆವಾಲಾ ಅವರನ್ನು ಪಂಜಾಬ್ನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪಂಜಾಬ್, ದೆಹಲಿ ಮತ್ತು ಮುಂಬೈ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ದೆಹಲಿಯ ತಿಹಾರ್ ಜೈಲಿನಲ್ಲಿದ್ದ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನಿರ್ದೇಶನದಂತೆ ಕೆನಡಾ ಮೂಲದ ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಈ ಕೊಲೆಯನ್ನು ನಿರ್ದೇಶಿಸಿದ್ದಾರೆ ಎಂದು ಹೇಳಲಾಗಿದೆ.