ಹೃದಯ ಚಿಕಿತ್ಸೆ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಆಗಿ ಆರೋಗ್ಯ ವಿಚಾರಿಸಿದರು.

ತಮ್ಮ ಭೇಟಿಗೆ ಬರುತ್ತಿದ್ದಂತೆ ಯಡಿಯೂರಪ್ಪ ಕುರ್ಚಿ ಕೊಡ್ರಪ್ಪ ಎಂದು ಸಿದ್ದರಾಮಯ್ಯ ಆಸ್ಪತ್ರೆಯ ಸಿಬ್ಬಂದಿಗೆ ಸೂಚಿಸಿದರು. ಬಳಿಕ ಸಿದ್ದರಾಮಯ್ಯ ಕೈ ಹಿಡಿದು ಮಾತಾಡಿದ ಯಡಿಯೂರಪ್ಪ ನೀವು ಮನೆಗೆ ಹೋಗ್ಬೇಡಿ, ಆಸ್ಪತ್ರೆಯಲ್ಲಿ ರೆಸ್ಟ್‌ ಮಾಡಿ. ಮನೆಗೆ ಹೋದ್ರೆ ರೆಸ್ಟ್‌ ಮಾಡೋದಕ್ಕೆ ಆಗಲ್ಲ. ನಾನು ಡಾಕ್ಟರ್‌ ಹತ್ತಿರ ಮಾತಾಡ್ದೆ. ವೈದ್ಯರೂ ಹೇಳಿದ್ದಾರೆ ಎಂದು ಸಿದ್ದರಾಮಯ್ಯಗೆ ಹೇಳಿದರು.

ಕಿಚಾಯಿಸಿದ ಈಶ್ವರಪ್ಪ:

ರಾಜಕೀಯ ಅಖಾಡದಲ್ಲಿ ಮಾತಿನ ಬಾಣಗಳ ಪ್ರಯೋಗಕ್ಕೆ ಸದಾ ಸುದ್ದಿಯಲ್ಲಿರುವ ಸಿದ್ದರಾಮಯ್ಯ ಮತ್ತು ಸಚಿವ ಕೆ ಎಸ್‌ ಈಶ್ವರಪ್ಪ ಆಸ್ಪತ್ರೆಯಲ್ಲಿ ಮಾತಾಡಿದ ರೀತಿ ಸ್ವಾರಸ್ಯಕರವಾಗಿತ್ತು.

ನಿಮಗೂ ಹಾರ್ಟ್ ಇದೆ ಎಂದು ಗ್ಯಾರಂಟಿ ಆಯ್ತು ಎಂದು ಈಶ್ವರಪ್ಪ ಸಿದ್ದರಾಮಯ್ಯ ಕಾಲೆಳೆದ್ರು. ಹೇ..ನಂಗೆ ಇಲ್ಲ ಅಂದ್ಕೊಂಡಿದ್ಯಾ ಎಂದು ಸಿದ್ದರಾಮಯ್ಯ ಕೇಳಿದರು. ಛೇ ಛೇ ಇಲ್ಲ ನಾನು ಯಾವತ್ತಾದ್ರೂ ಬಾಯಿಬಿಟ್ಟು ಹೇಳಿದ್ದೀನಾ ಎಂದು ಈಶ್ವರಪ್ಪ ಮರು ಹೇಳಿದರು. ನಂಗೊತ್ತಿಲ್ಲ, ನೀನ್‌ ಏನ್‌ ಅಂದ್ಕೊಂಡಿದ್ದೀಯಾ ಎಂದು ಸಿದ್ದರಾಮಯ್ಯ ಹೇಳಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಯಡಿಯೂರಪ್ಪ, ಸಿಎಂ ಆಗಿ ಆರೋಗ್ಯ ವಿಚಾರಿಸುವುದು ನನ್ನ ಕರ್ತವ್ಯ. ನಾನು ಬಂದಿದ್ದರು ಅವರಿಗೆ ಖುಷಿ ಆಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಜೊತೆಗಿನ ಸ್ನೇಹ

ನನ್ನ ಮತ್ತು ಸಿದ್ದರಾಮಯ್ಯ ಬಾಂಧವ್ಯ ಚೆನ್ನಾಗಿದೆ. ನಾವು ಪಕ್ಷದ ವಿಚಾರದಲ್ಲಿ ಎಷ್ಟೇ ಹೊಡದಾಡಬಹುದು. ಆದರೆ ಸ್ನೇಹದ ವಿಚಾರದಲ್ಲಿ ನಮ್ಮನ್ನು ಯಾರೂ ದೂರ ಮಾಡಲು ಸಾಧ್ಯವಿಲ್ಲ ಎಂದು ಈಶ್ವರಪ್ಪ ಹೇಳಿದರು.

ನಾವು ಹೊಡದಾಡಿಕೊಂಡಿದ್ದನ್ನು ನೋಡಿ ಜೀವನ ಪರ್ಯಂತ ನಾವು ಮಾತೇ ಆಡೋದಿಲ್ಲ ಎಂದು ಅಂದುಕೊಂಡವರಿದ್ದಾರೆ. ಪರಿಷತ್‌ನಲ್ಲೂ ಹೀಗೆ ಜೋರಾಗಿಯೇ ಜಗಳ ಆಡಿದ್ದೇವು. ಆದರೆ ನಾವು ಯಾವತ್ತೂ ಸ್ನೇಹದ ವಿಚಾರದಲ್ಲಿ ದೂರವಾಗಿಲ್ಲ. ನಾನು ಡಿಸಿಎಂ ಆದಾಗ ಅವರೇನಾದರೂ ನೋಟ್‌ ಕಳಿಸ್ತಿದ್ರು. ಹೂಂ ಅಂತ ಸನ್ನೆ ಮಾಡ್ತಿದ್ರು. ನಾನು ಸಹಿ ಹಾಕ್ತಿದ್ದೆ. ಅವರು ಸಿಎಂ ಆದಾಗಲೂ ನಾನು ಏನಾದರೂ ಕೆಲ್ಸ ಕಳ್ಸಿದ್ರೆ ಸಹಿ ಹಾಕ್ತಿದರು ಎಂದು ಸಿದ್ದರಾಮಯ್ಯ ಜೊತೆಗಿನ ಸ್ನೇಹದ ಬಗ್ಗೆ ಈಶ್ವರಪ್ಪ ಮಾಧ್ಯಮಗಳಿಗೆ ಹೇಳಿದರು.

ನಾನು ಕುಮಾರಣ್ಣನ ಜೊತೆಗೂ ಹೀಗೆ ಇದ್ದೇನೆ. ಆದರೆ ದೇವೇಗೌಡರ ಹತ್ತಿರ ಜಾಸ್ತಿ ಹೋಗೋದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಕೃತಜ್ಞತೆ

ತಮ್ಮನ್ನು ಭೇಟಿ ಆಗಿ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಯಡಿಯೂರಪ್ಪಗೆ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ವೈಯಕ್ತಿಕ ಸ್ನೇಹಕ್ಕೆ ಅಡ್ಡಿಯಾಗಬಾರದು ಎಂದು ನಂಬಿಕೊಂಡು ಬಂದವನು ನಾನು ಎಂದು ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

ಕುಮಾರಸ್ವಾಮಿ ಸಂದೇಶ:

ಇತ್ತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಸಿದ್ದರಾಮಯ್ಯರ ಆರೋಗ್ಯ ಬೇಗ ಸುಧಾರಿಸಲಿ ಎಂದು ಟ್ವೀಟಿಸಿದ್ದಾರೆ.

 

LEAVE A REPLY

Please enter your comment!
Please enter your name here