ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT ACT) ಸೆಕ್ಷನ್ 66ಎ (Section 66A) ಅಡಿ ಪ್ರಕರಣ ದಾಖಲಿಸುವಂತಿಲ್ಲ, ವಿಚಾರಣೆ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ (Supreme Court) ತ್ರಿಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರ ಪೀಠ ಈ ಬಗ್ಗೆ ಇವತ್ತು ಸ್ಪಷ್ಟಪಡಿಸಿದೆ.
2015ರಲ್ಲಿ ಶ್ರೇಯಾ ಸಿಂಘಾಲ್ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ IT ಕಾಯ್ದೆಯ 66ಎ ಸೆಕ್ಷನ್ನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ಆದರೆ 2015ರ ತೀರ್ಪಿನಲ್ಲಿ ಸೆಕ್ಷನ್ 66ಎ ರದ್ದಾಗಿದ್ದರೂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅರ್ಜಿದಾರರು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದರು.
ಆ ತೀರ್ಪಿನ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.
1. ಸೆಕ್ಷನ್ 66ಎ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳುವಂತಿಲ್ಲ ಮತ್ತು ವಿಚಾರಣೆ ನಡೆಸುವಂತಿಲ್ಲ.
2. ಒಂದು ವೇಳೆ ಸೆಕ್ಷನ್ 66ಎ ಅಡಿ ನಾಗರಿಕರು ವಿಚಾರಣೆ ಎದುರಿಸುತ್ತಿದ್ದರೆ ಆ ಸೆಕ್ಷನ್ನಡಿ ಮಾಡಲಾದ ಆರೋಪ ಮತ್ತು ಆ ಭಾಗಗಳು ವಜಾಗೊಳ್ಳಲಿವೆ.
3. ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳು ಸೆಕ್ಷನ್ 66ಎ ಅಡಿ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಬೇಕು.
ಏನಿದು ಸೆಕ್ಷನ್ 66ಎ..?
2008ರಲ್ಲಿ ಆಗಿನ ಯುಪಿಎ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸೆಕ್ಷನ್ 66ಎಯನ್ನು ಕಾಯ್ದೆಯೊಳಗೆ ಪರಿಚಯಿಸಿತು.
ಈ ಸೆಕ್ಷನ್ನಡಿ ಒಂದು ವೇಳೆ ಆನ್ಲೈನ್ ಪೋಸ್ಟ್ಗಳು (Online Posts – Facebook, Twitter, Whats app, Instagram ಮುಂತಾದ ಸಾಮಾಜಿಕ ಜಾಲತಾಣಗಳು ಸೇರಿದಂತೆ) ಅನುಚಿತ ಮತ್ತು ಮಾನಹಾನಿಕರ, ಸುಳ್ಳು ಎಂದು ಭಾವಿಸಿದ್ದಲ್ಲಿ ಆ ಸರ್ಕಾರಕ್ಕೆ ಅಂತಹ ಪೋಸ್ಟ್ನ್ನು ಹಾಕಿದ ವ್ಯಕ್ತಿಯನ್ನು ಬಂಧಿಸುವ ಅಧಿಕಾರವನ್ನು ನೀಡಿತ್ತು. ಈ ಪ್ರಕರಣದಲ್ಲಿ ಮೂರು ವರ್ಷಗಳವರೆಗೆ ಶಿಕ್ಷೆ ನೀಡುವ ಅಂಶವನ್ನೂ ಸೇರಿಸಲಾಗಿತ್ತು.
ADVERTISEMENT
ADVERTISEMENT