ಬೆಂಗಳೂರು: ಮಾರ್ಚ್ 1ರಂದು ಸ್ಫೋಟ ಸಂಭವಿಸಿದ್ದ ಐಟಿಪಿಎಲ್ ಮುಖ್ಯರಸ್ತೆಯ ‘ದಿ ರಾಮೇಶ್ವರಂ ಕೆಫೆ’ ಇಂದು ಗ್ರಾಹಕರಿಗೆ ಮುಕ್ತವಾಗಿದೆ. ಒಂದು ವಾರದ ಬಳಿಕ ಇಂದು ಬೆಳಿಗ್ಗೆಯಿಂದಲೇ ರಾಮೇಶ್ವರಂ ಕೆಫೆ ತನ್ನ ದೈನಂದಿನ ವಹಿವಾಟು ಆರಂಭಿಸಿದೆ. ಮಾರ್ಚ್ 9ರಿಂದ ಕೆಫೆ ಪುನರಾರಂಭಿಸುವುದಾಗಿ ಹೇಳಿದ್ದ ಕೆಫೆ ಮಾಲೀಕರು, ಶುಕ್ರವಾರದಂದು ಕೆಫೆಯಲ್ಲಿ ಪೂಜೆ, ಹೋಮ-ಹವನ ಕಾರ್ಯಗಳನ್ನು ನಡೆಸಿದ್ದರು.
ಸ್ಫೋಟದಿಂದ ಕೆಫೆಯಲ್ಲಿ ಹಾನಿಗೊಳಗಾಗಿದ್ದ ಸ್ಥಳವನ್ನು ಸಂಪೂರ್ಣವಾಗಿ ಮರು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಗ್ರಾಹಕರು ಪ್ರವೇಶಿಸುವ ಕಡೆಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಇಂದು ಬೆಳಿಗ್ಗೆಯಿಂದಲೇ ಗ್ರಾಹಕರು ಕೆಫೆಗೆ ಬರಲಾರಂಭಿಸಿದ್ದಾರೆ. ಪ್ರತಿಯೊಬ್ಬರನ್ನು ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಡಿಟೆಕ್ಟರ್ ಮೂಲಕ ಪರಿಶೀಲಿಸಿ ಬಳಿಕ ಕೆಫೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಸ್ಫೋಟ ಸಂಭವಿಸಿದ ಹಿನ್ನೆಲೆ, ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಿನ್ನೆ ಪೊಲೀಸ್ ಭದ್ರತೆಯಲ್ಲಿಯೇ ಪೂಜಾ ಕೈಂಕರ್ಯಗಳು ನಡೆದಿವೆ. ಹಾನಿಗೊಳಗಾದ ಭಾಗಗಳನ್ನು ದುರಸ್ತಿಗೊಳಿಸಿ, ಕೆಫೆಯನ್ನು ಸಂಪೂರ್ಣವಾಗಿ ತಳಿರು-ತೋರಣಗಳಿಂದ ಶೃಂಗರಿಸಲಾಗಿದೆ. ಶನಿವಾರ ಬೆಳಿಗ್ಗೆ 6.30ರಿಂದ ಕೆಫೆ ಪುನರಾರಂಭವಾಗಲಿದೆ ಎಂದು ಕೆಫೆಯ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳು ತಿಳಿಸಿದ್ದವು. ಜೊತೆಗೆ ಶಿವರಾತ್ರಿ ದಿನದಂದ ಮತ್ತೆ ಕೆಫೆ ಆರಂಭಿಸುವುದಾಗಿ ರಾಮೇಶ್ವರಂ ಕೆಫೆಯ ಸಂಸ್ಥಾಪಕ ರಾಘವೇಂದ್ರ ರಾವ್ ಈ ಮೊದಲು ತಿಳಿಸಿದ್ದರು.