ಪ್ರಧಾನಿ ನೇತೃತ್ವದ ನೀತಿ ಸಭೆಗೆ 7 ರಾಜ್ಯಗಳ CMಗಳು ಗೈರು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಗೆ ಏಳು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ.

ಕಾಂಗ್ರೆಸ್​ ಆಡಳಿತವಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದಾರೆ.

ಎಡಪಕ್ಷಗಳ ಆಡಳಿತವಿರುವ ಕೇರಳದ ಮುಖ್ಯಮಂತ್ರಿ ಪಿಣರಾಯ್​ ವಿಜಯನ್​ ಅವರು ಗೈರಾಗಿದ್ದಾರೆ. ಆದರೆ ಸಭೆಗೆ ಹೋಗದೇ ಇರುವುದಕ್ಕೆ ನಿರ್ದಿಷ್ಟ ಕಾರಣ ನೀಡಿಲ್ಲ.

ಆಮ್​ ಆದ್ಮಿ ಪಕ್ಷದ ಆಡಳಿತ ಇರುವ ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮನ್​ ಅವರು ಪಂಜಾಬ್ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ನೀತಿ ಆಯೋಗದ ಸಭೆಗೆ ಗೈರಾಗಿದ್ದಾರೆ. ರಾಜ್ಯದ ಪರವಾಗಿ ನಾವು ಎತ್ತಿರುವ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸುವವರೆಗೆ ನೀತಿ ಆಯೋಗದ ಸಭೆಗೆ ಹಾಜರಾಗಿ ಏನೂ ಪ್ರಯೋಜವಿಲ್ಲ, ಈ ಸಭೆ ಕೇವಲ ಫೋಟೋ ತೆಗೆಸಿಕೊಳ್ಳಷ್ಟೇ ಸೀಮಿತ ಎಂದು ಸಿಎಂ ಮನ್​ ಆಕ್ರೋಶ ಹೊರಹಾಕಿದ್ದಾರೆ.

ದೆಹಲಿ ಸರ್ಕಾರ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಕೂಡಾ ಸಭೆಗೆ ಗೈರಾಗಿದ್ದಾರೆ. ದೆಹಲಿ ಆಡಳಿತದಲ್ಲಿ ಅಲ್ಲಿನ ಸರ್ಕಾರಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಿದ್ದ ಸುಪ್ರೀಂಕೋರ್ಟ್​ನ್ನು ಐತಿಹಾಸಿಕ ತೀರ್ಪನ್ನು ಉಲ್ಲಂಘಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಹೊಸ ಕಾನೂನನ್ನು ವಿರೋಧಿಸಿ ನೀತಿ ಆಯೋಗದ ಸಭೆಗೆ ದೆಹಲಿ ಸಿಎಂ ಗೈರಾಗಿದ್ದಾರೆ.

ಬಿಜೆಪಿ ವಿರುದ್ಧ ರಾಷ್ಟ್ರರಾಜಕಾರಣದಲ್ಲಿ ಮೈತ್ರಿಕೂಟ ರಚಿಸುವ ಪ್ರಯತ್ನದಲ್ಲಿರುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ ರಾವ್​, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಹಾರ ಸಿಎಂ ನಿತೀಶ್​ ಕುಮಾರ್​ ಕೂಡಾ ಗೈರಾಗಿದ್ದಾರೆ.