ADVERTISEMENT
71 ಮಂದಿ ಮಂತ್ರಿಗಳನ್ನು ಒಳಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 71 ಮಂದಿ ಮಂತ್ರಿಗಳಲ್ಲಿ 30 ಮಂದಿ ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ರಾಜ್ಯ ಸಚಿವರು ಮತ್ತು ಉಳಿದ 36 ಮಂದಿ ರಾಜ್ಯ ಖಾತೆ ಸಚಿವರು.
2014ರಲ್ಲಿ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದಾಗ ಮೊದಲ ಪ್ರಮಾಣವಚನದಲ್ಲಿ ಸಂಪುಟ ಸೇರಿದ ಮಂತ್ರಿಗಳ ಸಂಖ್ಯೆ ಕೇವಲ 44. ಇವರಲ್ಲಿ 23 ಮಂದಿ ಕ್ಯಾಬಿನೆಟ್ ದರ್ಜೆ ಮಂತ್ರಿಗಳು, 10 ಮಂದಿ ಸ್ವತಂತ್ರ ಖಾತೆ ರಾಜ್ಯ ಸಚಿವರು ಮತ್ತು 12 ಮಂದಿ ರಾಜ್ಯ ಖಾತೆ ಸಚಿವರಿದ್ದರು.
2019ರಲ್ಲಿ ಮೋದಿಯವರ 2ನೇ ಅವಧಿಯ ಮೊದಲ ಪ್ರಮಾಣವಚನದಲ್ಲಿ 56 ಮಂದಿ ಸಂಸದರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇವರಲ್ಲಿ 24 ಮಂದಿ ಕ್ಯಾಬಿನೆಟ್ ದರ್ಜೆ ಸಚಿವರು, 9 ಮಂದಿ ಸ್ವತಂತ್ರ ಖಾತೆ ರಾಜ್ಯ ಸಚಿವರು ಮತ್ತು 24 ಮಂದಿ ರಾಜ್ಯ ಸಚಿವರಿದ್ದರು.
ಆದರೆ ತಮ್ಮ ಮೊದಲವಾಧಿಯಲ್ಲಿ 2016ರಲ್ಲಿ ಸಂಪುಟ ಪುನರ್ರಚನೆ ಮಾಡಿದ ಮೋದಿ ಸಂಪುಟದ ಗಾತ್ರವನ್ನು 75ಕ್ಕೆ ಹಿಗ್ಗಿಸಿದರು. 2019-2024ರ ಅವಧಿಯಲ್ಲೂ ಮೋದಿ ಸಂಪುಟದಲ್ಲಿ ಪುನರ್ರಚನೆ ಬಳಿಕ ಗರಿಷ್ಠ 77 ಮಂದಿ ಸಚಿವರಿದ್ದರು.
ಆದರೆ ಮೂರನೇ ಅವಧಿಯಲ್ಲಿ ಮೊದಲ ಪ್ರಮಾಣವಚನದಲ್ಲೇ 71 ಮಂದಿ ಸಚಿವರನ್ನು ಸೇರ್ಪಡೆ ಮಾಡಿಕೊಂಡಿರುವುದರಿಂದ ಪುನರ್ರಚನೆಗೆ ಅವಕಾಶ ಇದ್ದಂತಿಲ್ಲ.
ಸಂವಿಧಾನದ ನಿಯಮಗಳ ಪ್ರಕಾರ ಕೇಂದ್ರ ಸಂಪುಟದಲ್ಲಿ ಗರಿಷ್ಠ ಪ್ರಧಾನಮಂತ್ರಿ ಒಳಗೊಂಡು 81 ಮಂದಿ ಸಚಿವರನ್ನು ಸೇರಿಸಿಕೊಳ್ಳಲು ಅವಕಾಶವಿದೆ.
ADVERTISEMENT