ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರು ಇಂದು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎನ್ಸಿಪಿ ಮುಖಂಡ ಶರದ್ ಪವಾರ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.
ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ, ಟಿಆರ್ಎಸ್ ನಾಯಕ ಕೆ.ಟಿ. ರಾಮ ರಾವ್ ಸಹ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಸಿನ್ಹಾ ಅವರು ಸಂಸತ್ತಿನ ಆವರಣದಲ್ಲಿ ಮಹಾತ್ಮ ಗಾಂಧಿ ಹಾಗೂ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ನಮನ ಸಲ್ಲಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಯಶವಂತ್ ಸಿನ್ಹಾ ಅವರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಅವರು ಪಶ್ಚಿಮ ಬಂಗಾಳದಲ್ಲಿ ಡಿಎಂಸಿ ಪಕ್ಷ ಸೇರ್ಪಡೆಯಾಗಿದ್ದರು. ಸಿನ್ಹಾ ಅವರನ್ನು ಜೂನ್ 21ರಂದು ವಿರೋಧ ಪಕ್ಷಗಳ ಸಭೆಯಲ್ಲಿ ಅವಿರೋಧವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು.
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಕಳೆದ ವಾರ ನಾಮಪತ್ರ ಸಲ್ಲಿಸಿದ್ದಾರೆ.