ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಬಂಧಿತ ಆರೋಪಿ. ಟ್ರೋಲ್ ಪೇಜ್ ನ ಅಡ್ಮಿನ್ ಆಗಿರುವ ಆರೋಪಿ ಪ್ರಜ್ವಲ್, ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋಗಳನ್ನು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದ. ಆರೋಪಿ ಪ್ರಜ್ವಲ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜ್ವಲ್ ರೇವಣ್ಣರದ್ದು ಎನ್ನಲಾಗ್ತಿರುವ ಸಾವಿರಾರು ಅಶ್ಲೀಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕವಷ್ಟೇ ಸರ್ಕಾರ ಎಸ್ ಐಟಿ ತನಿಖೆಗೆ ಈ ಪ್ರಕರಣವನ್ನ ವಹಿಸಿತ್ತು. ಈ ವಿಡಿಯೋಗಳಲ್ಲಿ ಹಾಸನ ಸೇರಿದಂತೆ ಹಲವು ಜಿಲ್ಲೆಗಳ ಮಹಿಳೆಯರು ಇದ್ದಾರೆ ಎನ್ನಲಾಗ್ತಿದೆ. ಇನ್ನು ಈ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಯಾವ ಮಹಿಳೆಯರ ಮುಖವನ್ನೂ ಕೂಡ ಬ್ಲರ್ ಮಾಡದೆ ವಿಡಿಯೋ ರಿಲೀಸ್ ಮಾಡಲಾಗಿದೆ. ಹೀಗಾಗಿ ಆ ಮಹಿಳೆಯರ ಸುರಕ್ಷತೆ ಮತ್ತು ಘನತೆಯ ದೃಷ್ಟಿಯಿಂದಾಗಿ ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದೆ. ಪರಿಣಾವಾಗಿ ಇದೀಗ ಆರೋಪಿ ಪ್ರಜ್ವಲ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇನ್ನು ಈ ಕುರಿತಾಗಿ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ಹೊರಡಿಸಿ, ಅಶ್ಲೀಲ ವಿಡಿಯೋಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಇಟ್ಟುಕೊಳ್ಳುವುದು ಕೂಡ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದಲ್ಲಿ ಅಂತಹವರನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿದ್ರು.
ಅಶ್ಲೀಲ ವಿಡಿಯೋ ಅಥವ ಈ ಅಶ್ಲೀಲ ಆಡಿಯೋ ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಸಾರ್ವಜನಿಕರು ತಮ್ಮ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇದನ್ನ ಸೇವ್ ಮಾಡಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ರು. ಇದಾದ ಬಳಿಕ ಎಸ್ಐಟಿ ಅಧಿಕಾರಿಗಳು ಈ ವಿಡಿಯೋಗಳನ್ನು ಹರಿಬಿಟ್ಟ ವ್ಯಕ್ತಿಗಾಗಿ ಬಲೆ ಬೀಸಿದ್ದರು. ಇದೀಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಈತನ ವಿಚಾರಣೆಯನ್ನು ತನಿಖಾಧಿಕಾರಿಗಳು ತೀವ್ರಗೊಳಿಸಿದ್ದು ಈತನಿಗೆ ವಿಡಿಯೋ ಹೇಗೆ ಲಭ್ಯವಾಯ್ತು ಎನ್ನುವ ಕುರಿತಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.