ದೇಶಾದ್ಯಂತ ನಡೆಯುತ್ತಿರುವ ಕೋಮು ಗಲಭೆಗಳ ಬಗ್ಗೆ ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು, ಮೋದಿ, ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಅವರ ಸಿದ್ಧಾಂತವನ್ನು ನೇರವಾಗಿ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿ ಬಗ್ಗೆ ಜಿಗ್ನೇಶ್ ಮೇವಾನಿ ಹೇಳಿದ್ದನ್ನು ಪುನರುಚ್ಚರಿಸಿದ ಟಿಆರ್ಎಸ್ ನಾಯಕ, ಗುಜರಾತ್ ಶಾಸಕನನ್ನು ಅಸ್ಸಾಂ ಪೊಲೀಸರು ಬಂಧಿಸಿದಂತೆ ಮೋದಿ ಸರ್ಕಾರಕ್ಕೆ ಧೈರ್ಯ ಇದ್ದರೆ ತಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂದ ಕೆಟಿಆರ್ ಅವರು, ಈ ಪ್ರಧಾನಿ ವಾಸ್ತವವಾಗಿ ಮೌನವಾಗಿ ಮತ್ತು ನೇರವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಹಂತಕನ ಸಿದ್ಧಾಂತವನ್ನು ಅನುಮೋದಿಸುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ ಎಂದರು.
ಇಂದು ಆಯ್ದ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಕೆಟಿಆರ್ ಎಂದೇ ಜನಪ್ರಿಯವಾಗಿರುವ ತೆಲಂಗಾಣ ಸಚಿವ ರಾಮರಾವ್ ಅವರು, ಪ್ರಧಾನಿಯಾಗಿ, ಸಾರ್ವಜನಿಕವಾಗಿ ಬಹಿರಂಗವಾಗಿ ಗೋಡ್ಸೆಯನ್ನು ಹೊಗಳುತ್ತಿರುವ ನಿಮ್ಮ ಪಕ್ಷದ ಸಂಸದರ ನಡೆಯನ್ನು ನೀವು ಖಂಡಿಸದಿದ್ದರೆ ಗೋಡ್ಸೆಯ ಸಿದ್ಧಾಂತವನ್ನು ಅನುಮೋದಿಸಿದಂತೆ ಎಂದಿದ್ದಾರೆ.