ನವರಸನಾಯಕ ಜಗ್ಗೇಶ್ ಅಭಿನಯದ ‘ರಂಗನಾಯಕ’ ಸಿನಿಮಾ ಬಿಡುಗಡೆಗೆ ತಡೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರೊಂದಿಗೆ ತಕಾರಾರು ಇರುವುದರಿಂದ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ, ಸಿಟಿ ಸಿವಿಲ್ ಕೋರ್ಟ್ಗೆ ಶ್ರೀನಿವಾಸ್ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.
ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರು 2015-16 ರಲ್ಲಿ ನನ್ನ ಬಳಿ 30 ಲಕ್ಷ ರೂ. ಸಾಲ ಪಡೆದಿದ್ದಾರೆ. ಆದರೆ, ಬಹಳ ವರ್ಷಗಳಾದರೂ ಅವರು ಸಾಲ ಮರು ಪಾವತಿ ಮಾಡಿಲ್ಲ ಎಂದು ಶ್ರೀನಿವಾಸ್ ಆರೋಪಿಸಿದ್ದರು. ನಿರ್ದೇಶಕ ಗುರುಪ್ರಸಾದ್, ಸಾಲ ಪಡೆಯುವಾಗ ಶ್ರೀನಿವಾಸ್ಗೆ ಮೂರು ಚೆಕ್ಗಳನ್ನು ನೀಡಿದ್ದರು. ಆದರೆ ಚೆಕ್ಗಳು ಬೌನ್ಸ್ ಆಗಿವೆ ಎಂದು ಆರೋಪಿಸಿ ಶ್ರೀನಿವಾಸ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ಗಿರಿನಗರ ಠಾಣೆ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ 21 ನೇ ಎಸಿಎಂಎಂ ನ್ಯಾಯಾಲಯವು ಗುರುಪ್ರಸಾದ್ಗೆ ಜಾಮೀನು ಮಂಜೂರು ಮಾಡಿತ್ತು.
”ಬಂಧನವಾದ ಸಂದರ್ಭದಲ್ಲಿ ‘ರಂಗನಾಯಕ’ ಸಿನಿಮಾದ ಕಾರ್ಯಗಳಲ್ಲಿ ತೊಡಗಿದ್ದೇನೆ, ಸಿನಿಮಾ ಬಿಡುಗಡೆಯಾಗುವ ಮುನ್ನವೇ ಹಣ ಮರುಪಾವತಿ ಮಾಡುತ್ತೇನೆ ಎಂದು ಗುರುಪ್ರಸಾದ್ ಅವರೇ ಹೇಳಿದ್ದರು. ಆದರೆ ಈಗಲೂ ಸಹ ಹಣ ಕೇಳಿದರೆ ಅವರಿಂದ ಅದೇ ಹಳೆಯ ಧೋರಣೆ ವ್ಯಕ್ತವಾಗುತ್ತಿದೆ. ಆದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದೇನೆ” ಎಂದು ದೂರುದಾರ ಶ್ರೀನಿವಾಸ್ ಅವರು ತಿಳಿಸಿದ್ದಾರೆ.