ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಸಾಮಾನ್ಯ ವರ್ಗದಲ್ಲಿ ಆಯ್ಕೆಗೊಂಡ ಹಿಂದುಳಿದ ವರ್ಗದ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಸಲ್ಲಿಸುವುದನ್ನು ಕಡ್ಡಾಯ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಮೀಸಲಾತಿ ಕೋರಿ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟ ಹುದ್ದೆಗಳಿಗೆ ಆಯ್ಕೆಗೊಂಡಾಗಲೂ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸುವಂತೆ ಕೆಲವು ಪ್ರಾಧಿಕಾರಗಳು ಅಭ್ಯರ್ಥಿಗಳಿಗೆ ಸೂಚಿಸುತ್ತಿವೆ.
ಇದರಿಂದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅನಗತ್ಯ ತೊಂದರೆ ಅಗುತ್ತಿದೆ ಎಂದು ದೂರು ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ಮೀಸಲಾತಿಯಿಂದ ಯಾವುದೇ ರಿಯಾಯಿತಿ ಪಡೆಯದೇ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಅಯ್ಕೆಗೊಂಡ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯಗೊಳಿಸಬಾರದು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ADVERTISEMENT
ADVERTISEMENT