ಕೇಂದ್ರ ಸರ್ಕಾರದ ಇಂಧನದ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕಡಿತದಿಂದ ರಾಜ್ಯಗಳ ಪಾಲಿನ ಆದಾಯಕ್ಕೆ ನಷ್ಟವಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಇಂಧನದ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಒಂದು ದಿನದ ನಂತರ ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ನಲ್ಲಿ ಕಡಿತ ಮಾಡಿರುವುದರಿಂದ ಈ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಬೇಕಾಗುತ್ತದೆ, ಅದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವು ನಾಲ್ಕು ಘಟಕಗಳನ್ನು ಹೊಂದಿದ್ದು, ಮೂಲ ಅಬಕಾರಿ ಸುಂಕ, ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED), ರಸ್ತೆ ಮತ್ತು ಮೂಲಸೌಕರ್ಯ ಸೆಸ್ (RIC) ಮತ್ತು ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ (AIDC) ಈ ಘಟಕಗಳಾಗಿವೆ. ಈ ಪೈಕಿ ಮೂಲ ಅಬಕಾರಿ ಸುಂಕವನ್ನು ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ಹಂಚಿಕೊಳ್ಳಬಹುದು. ಆದರೆ SAED, RIC ಮತ್ತು AIDC ಗಳನ್ನು ಹಂಚಿಕೊಳ್ಳಲಾಗುವುದಿಲ್ಲ, ಆದ್ದರಿಂದ ರಾಜ್ಯಗಳಿಗೆ ಇದರ ಹೆಚ್ಚುವರಿ ಭಾರ ಬೀಳುವುದಿಲ್ಲ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಪೆಟ್ರೋಲ್ ಮೇಲೆ ರೂ 8/ಲೀಟರ್ ಮತ್ತು ಡೀಸೆಲ್ ಮೇಲೆ ರೂ 6/ಲೀಟರ್ ಅಬಕಾರಿ ಸುಂಕ ಕಡಿತ ಸಂಪೂರ್ಣವಾಗಿ ರಸ್ತೆ ಮತ್ತು ಮೂಲಸೌಕರ್ಯ ಸೆಸ್ (RIC) ನಲ್ಲಿ ಮಾಡಲಾಗಿದೆ. ನವೆಂಬರ್ 21 ರಲ್ಲಿಯೂ ಸಹ, ಪೆಟ್ರೋಲ್‌ನಲ್ಲಿ ರೂ 5/ಲೀಟರ್ ಮತ್ತು ಡೀಸೆಲ್‌ನಲ್ಲಿ ರೂ 10/ಲೀಟರ್ ಕಡಿತವನ್ನು ಸಂಪೂರ್ಣವಾಗಿ ಆರ್‌ಐಸಿಯಲ್ಲಿ ಮಾಡಲಾಗಿತ್ತು ಎಂದು ಅವರು ಹೇಳಿದರು.
ಅಬಕಾರಿ ಸುಂಕ ಕಡಿತದಿಂದ ಕೇಂದ್ರಕ್ಕೆ ವಾರ್ಷಿಕ 1 ಲಕ್ಷ ಕೋಟಿ ರೂ ಆದಾಯ ಖೋತಾ ಆಗಲಿದ್ದು, ನವೆಂಬರ್ 2021 ರಲ್ಲಿ ಸುಂಕ ಕಡಿತದ ಆದಾಯವು 1.2 ಲಕ್ಷ ಕೋಟಿ ರೂ ಆಗಿತ್ತು. ಆ ಮೂಲಕ ಇದೀಗ ಕೇಂದ್ರ ಸರ್ಕಾರಕ್ಕೆ ಒಟ್ಟು 2.2 ಲಕ್ಷ ಕೋಟಿ ಆದಾಯ ನಷ್ಟವಾಗಿದೆ ಎಂದು ಸೀತಾರಾಮನ್ ಹೇಳಿದರು.