ಮಣಿಪುರದ ನೋನಿ ಜಿಲ್ಲೆಯಲ್ಲಿ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 24ಕ್ಕೆ ಏರಿಕೆಯಾಗಿದೆ ಹಾಗೂ 38 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಲು ಟುಪುಲ್ನ ಸ್ಥಳದಲ್ಲಿ ಹೆಚ್ಚಿನ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಸೇನೆ, ಅಸ್ಸಾಂ ರೈಫಲ್ಸ್, ಟೆರಿಟೋರಿಯಲ್ ಆರ್ಮಿ, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಸ್ಥಳದಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ಗುವಾಹತಿಯ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಇಲ್ಲಿಯವರೆಗೆ, 13 ಪ್ರಾದೇಶಿಕ ಸೇನಾ ಸಿಬ್ಬಂದಿ ಮತ್ತು ಐದು ನಾಗರಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 18 ಪ್ರಾದೇಶಿಕ ಸೇನಾ ಸಿಬ್ಬಂದಿ ಮತ್ತು ಆರು ನಾಗರೀಕರ ಮೃತದೇಹಗಳು ದೊರಕಿವೆ. ಕಾಣೆಯಾದ 12 ಪ್ರಾದೇಶಿಕ ಸೇನಾ ಸಿಬ್ಬಂದಿ ಮತ್ತು 26 ನಾಗರಿಕರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಜೂನಿಯರ್ ಕಮಿಷನ್ಡ್ ಆಫೀಸರ್ ಸೇರಿದಂತೆ 14 ಸಿಬ್ಬಂದಿಯ ಮೃತದೇಹಗಳನ್ನು ಎರಡು ಐಎಎಫ್ ವಿಮಾನಗಳು ಮತ್ತು ಸೇನಾ ಹೆಲಿಕಾಪ್ಟರ್ ಮೂಲಕ ಅವರ ಸ್ವಗ್ರಾಮಕ್ಕೆ ಕಳುಹಿಸಲಾಗಿದೆ. ಒಬ್ಬ ಸಿಬ್ಬಂದಿಯ ಮೃತದೇಹವನ್ನು ರಸ್ತೆ ಮಾರ್ಗವಾಗಿ ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಗೆ ಕಳುಹಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಮೃತದೇಹಗಳನ್ನು ಅವರ ಸ್ಥಳಗಳಿಗೆ ಕಳುಹಿಸುವ ಮೊದಲು ಇಂಫಾಲ್ನಲ್ಲಿ ಮೃತ ಸಿಬ್ಬಂದಿಗೆ ಸಂಪೂರ್ಣ ಮಿಲಿಟರಿ ಗೌರವವನ್ನು ನೀಡಲಾಗಿದೆ.
ಇನ್ನು, ಇಂದು ಶನಿವಾರವೂ ಇದೇ ಸ್ಥಳದಲ್ಲಿ ಮತ್ತೆ ಭೂ ಕುಸಿತವಾಗಿದೆ.