ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಬಹುಮತವನ್ನು ಸಾಬೀತುಪಡಿಸುವಂತೆ ಸೂಚಿಸಿದ್ದಾರೆ. ಸಂಜೆ 5 ವೇಳೆಗೆ ವಿಶ್ವಾಸ ಮತಯಾಚನೆ ಪೂರ್ಣಗೊಳಿಸುವಂತೆಯೂ ಸೂಚಿಸಿದ್ದಾರೆಂದು ತಿಳಿದುಬಂದಿದೆ,
ನಾನು ಹಾಗೂ ಭಿನ್ನಮತೀಯರ ಶಾಸಕರ ತಂಡ ನಾಳೆ ಮುಂಬೈಗೆ ತೆರಳಲಿದ್ದು, ಬಹುಮತ ಸಾಬೀತು ಪಡಿಸಿ ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸುತ್ತೇನೆಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಬುಧವಾರ ಹೇಳಿದ್ದಾರೆ.
ಮಂಗಳವಾರ ಹೇಳಿಕೆ ನೀಡಿದ್ದ ಏಕನಾಥ್ ಶಿಂಧೆಯವರು, 50ಕ್ಕೂ ಹೆಚ್ಚು ಶಾಸಕರ ಬೆಂಬಲ ನನಗಿದ್ದು, ಶೀಘ್ರದಲ್ಲೇ ಮುಂಬೈಗೆ ಮರಳುತ್ತೇನೆ, ಬಾಳಾ ಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇನೆಂದು ಹೇಳಿದ್ದರು.
ಈ ಎಲ್ಲಾ ಬೆಳವಣಿಗೆ ನಡುವೆ ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ಮಂಗಳವಾರ 8 ಸ್ವತಂತ್ರ ಶಾಸಕರೊಂದಿಗೆ ಮಹಾರಾಷ್ಟ್ರ ರಾಜ್ಯಪಾಲರಿಗೆ ಪತ್ರವನ್ನು ಸಲ್ಲಿಸಿದ್ದು, ಕೂಡಲೇ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.