96 ವರ್ಷ ವಯಸ್ಸಿನ ಬಿಜೆಪಿ ಭೀಷ್ಮ, ಬಿಜೆಪಿ ಮಾರ್ಗದರ್ಶಕ ಮಂಡಳಿ ಸದಸ್ಯ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಲಾಗಿದೆ.
ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಟ್ವೀಟಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಿಹಾರ ರಾಜಕಾರಣದಲ್ಲಿ ಜನನಾಯಕ ಎಂದೇ ಕರೆಸಿಕೊಂಡಿದ್ದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಣೆ ಮಾಡಿತ್ತು.
2019ರಲ್ಲಿ ಒಂದೇ ವರ್ಷ ಮೂವರಿಗೆ ಭಾರತ ರತ್ನ ಘೋಷಿಸಲಾಗಿತ್ತು. ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ, ನಾನಾಜಿ ದೇಶ್ಮುಖ್ ಮತ್ತು ಭೂಪೇನ್ ಹಜಾರಿಕಾ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಘೋಷಿಸಲಾಗಿತ್ತು.
2015ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ನೀಡಲಾಗಿತ್ತು.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಬಂದ ಬಳಿಕ ಒಟ್ಟು ಆರು ಮಂದಿಗೆ ಭಾರತ ರತ್ನ ಘೋಷಿಸಲಾಗಿದೆ. 2015ರಲ್ಲಿ ಮದನ್ ಮೋಹನ್ ಮಳಾವಿಯ, ಅಟಲ್ ಬಿಹಾರಿ ವಾಪೇಯಿ ಅವರಿಗೆ ಭಾರತ ರತ್ನ ಘೋಷಿಸಲಾಗಿತ್ತು.
2016, 2017, 2018, 2020,2021,2022, 2023ರಲ್ಲಿ ಯಾರಿಗೂ ಭಾರತ ರತ್ನ ಘೋಷಿಸಲಾಗಿಲ್ಲ.
ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸುವುದರೊಂದಿಗೆ ದೇಶದಲ್ಲಿ ಬಿಜೆಪಿ ಬೇರೂರಲು ಪ್ರಮುಖ ಶಕ್ತಿಗಳಾಗಿದ್ದ ಅಡ್ವಾಣಿ ಮತ್ತು ವಾಜಪೇಯಿ ಇಬ್ಬರಿಗೂ ಮೋದಿ ಸರ್ಕಾರ ಗೌರವ ನೀಡಿದೆ.