ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಪಪ್ಪಾಯ ಹಣ್ಣಿನಿಂದ ನಮ್ಮ ಸೌಂದರ್ಯಕ್ಕೆ ಮತ್ತು ಚರ್ಮಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬುದು ಗೊತ್ತಾ? ಪಪ್ಪಾಯ ಹಣ್ಣಿನ ಫೇಸ್ಪ್ಯಾಕ್ ಮಾಡಿಕೊಳ್ಳುವುದರಿಂದ ಮುಖದ ತ್ವಚೆ ಕಾಂತಿಯುಕ್ತವಾಗುತ್ತದೆ, ಇದು ಚರ್ಮವನ್ನು ಮೃದುಗೊಳಿಸುತ್ತದೆ, ತ್ವಚೆಯ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ, ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಹಾಗಾದರೆ, ಯಾವ ರೀತಿಯ ಚರ್ಮದವರು ಯಾವ ರೀತಿ ಪಪ್ಪಾಯಿ ಫೇಸ್ ಪ್ಯಾಕ್ ಮಾಡಿಕೊಳ್ಳವುದೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪಪ್ಪಾಯಿಯು ವಿಶೇಷವಾಗಿ ತ್ವಚೆಯ ವಿಚಾರದಲ್ಲಿ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಪಿಗ್ಮೆಂಟೇಶನ್ ಮಸುಕಾಗಲು ಸಹಾಯ ಮಾಡುತ್ತದೆ.
ಒಣ ಚರ್ಮದವರು ಪಪ್ಪಾಯಿ ಹಣ್ಣು ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಫೇಸ್ಪ್ಯಾಕ್ ಮಾಡಿಕೊಳ್ಳುವುದರಿಂದ ಒಣ ತ್ವಚೆಗೆ ಉತ್ತಮವಾದ ಮಾಯಿಶ್ಚರೈಸರ್ ಸಿಗುತ್ತದೆ. ಇವೆರಡೂ ನಿಮ್ಮ ಮುಖದ ಚರ್ಮವನ್ನು ಎಫ್ಫೋಲಿಯೇಟ್ ಮಾಡಿ ಮತ್ತು ಹೈಡ್ರೇಟ್ ಮಾಡುತ್ತದೆ. ಇದು ಮೃದುವಾದ, ನಯವಾದ, ಕಾಂತಿಯುತವಾದ ಚರ್ಮವನ್ನು ನೀಡುತ್ತದೆ.
ಈ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?:
ಮಾಗಿದ ಪಪ್ಪಾಯಿ ಹಣ್ಣನ್ನು 1 ಕಪ್ ಹಿಸುಕಿಟ್ಟುಕೊಳ್ಳಿ. ಅದನ್ನು 1 ಚಮಚ ಜೇನುತುಪ್ಪ ಮತ್ತು ಎರಡು ಟೇಬಲ್ ಸ್ಪೂನ್ ತಾಜಾ ಹಾಲಿನೊಂದಿಗೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಂಡು, 15ರಿಂದ 20 ನಿಮಿಷಗಳ ಕಾಲ ಒಣಗಲು ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.