ಜಮ್ಮು-ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಪರಿಸ್ವನಿ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಲಷ್ಕರ್ ಇ ತಯ್ಬಾ (LET)ದ ಉನ್ನತ ಕಮಾಂಡರ್ ಯೂಸಫ್ ಕಂಟ್ರೂ ಸೇರಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೊಂದು ಯಶಸ್ವಿ ಕಾರ್ಯಾಚರಣೆ ಎಂದು ಜಮ್ಮು-ಕಾಶ್ಮೀರ ವಲಯ ಇನ್ಸ್ ಪೆಕ್ಟರ್ ಜನರಲ್ ವಿಜಯ್ ಕುಮಾರ್ ತಿಳಿಸಿದ್ದಾರೆ.
ಬಾರಾಮುಲ್ಲ ಎನ್ ಕೌಂಟರ್ ನಲ್ಲಿ ಎಲ್ಇಟಿ ಉನ್ನತ ಕಮಾಂಡರ್ ಯೂಸಫ್ ಕಂಟ್ರೂ ಹತ್ಯೆಗೀಡಾಗಿದ್ದಾನೆ. ಈತ ಹಲವು ನಾಗರಿಕರ ಸಾವು ಮತ್ತು ಭದ್ರತಾ ಸಿಬ್ಬಂದಿಗಳ ಹುತಾತ್ಮ ಪ್ರಕರಣದಲ್ಲಿ ಭಾಗಿಯಾಗಿದ್ದನು. ಇತ್ತೀಚೆಗೆ ಜಮ್ಮು-ಕಾಶ್ಮೀರ ಪೊಲೀಸ್ ವಲಯದ ಎಸ್ ಪಿಒ ಮತ್ತು ಆತನ ಸೋದರನ ಹತ್ಯೆಯಲ್ಲಿ ಭಾಗಿಯಾಗಿದ್ದನು. ಬುದ್ಗಮ್ ಜಿಲ್ಲೆಯಲ್ಲಿ ಓರ್ವ ಸೈನಿಕ ಮತ್ತು ನಾಗರಿಕ ಹತ್ಯೆಯಲ್ಲಿ ಭಾಗಿಯಾಗಿದ್ದನು. ಇಂದಿನ ಎನ್ ಕೌಂಟರ್ ಪೊಲೀಸರ ದೊಡ್ಡ ಕಾರ್ಯಾಚರಣೆಯಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಎನ್ ಕೌಂಟರ್ ನಲ್ಲಿ ಮೂವರು ಸೈನಿಕರು ಮತ್ತು ನಾಗರಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾರಾಮುಲ್ಲ ಜಿಲ್ಲೆಯ ಪರಿಸ್ವನಿ ಪ್ರದೇಶದ ಮಲ್ವ ಎಂಬಲ್ಲಿ ಎನ್ ಕೌಂಟರ್ ನಡೆದಿದೆ.