ಇಂಧನ, ವೇತನ ಹೆಚ್ಚಳಕ್ಕೆ ಅನುದಾನ ಕೊಡಕ್ಕಾಗಲ್ಲ – 4 ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಸುತ್ತೋಲೆ

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯನ್ನು ಜಾರಿಗೊಳಿಸಿರುವ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಈಗ ಸಾರಿಗೆ ನೌಕರರ ವೇತನ ಪರಿಷ್ಕರಣೆಯ ಹೆಚ್ಚುವರಿ ವೆಚ್ಚವನ್ನು ಆಂತರಿಕ ಸಂಪನ್ಮೂಲಗಳಿಂದ ಭರಿಸುವಂತೆ ಸೂಚಿಸಿದೆ.

ಈ ಸಂಬಂಧ ಸಾರಿಗೆ ಇಲಾಖೆ ಕಾರ್ಯದರ್ಶಿ ಅವರು ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ನಾಲ್ಕು ನಿಗಮಗಳ ನೌಕರರ ವೇತನ ಪರಿಷ್ಕರಣೆಯ ಹೆಚ್ಚುವರಿ ವೆಚ್ಚವನ್ನು ನಿಗಮಗಳ ಆಂತರಿಕ ಸಂಪನ್ಮೂಲದಿಂದ ಭರಿಸುವಂತೆ ಮತ್ತು ಇಂಧನ ಮತ್ತು ವೇತನ ಪಾವತಿಗಾಗಿ ಹೆಚ್ಚುವರಿ ಅನುದಾನವನ್ನು ಒದಗಿಸಲು ಸಾಧ್ಯವಿಲ್ಲವೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಂದರೆ ನೌಕರರ ವೇತನ ಪರಿಷ್ಕರಣೆ ವೆಚ್ಚ ಮತ್ತು ಇಂಧನ ವೆಚ್ಚವನ್ನು ನಿಗಮಗಳೇ ತಮ್ಮ ಗಳಿಕೆಯಿಂದ ಭರಿಸಬೇಕಾಗುತ್ತದೆ.