Ola, Uber, Rapido ಆಟೋ ಸೇವೆ ಎಂದಿನಂತೆ ಆರಂಭ – ಕರ್ನಾಟಕ ಹೈಕೋರ್ಟ್​ನಿಂದ ಅನುಮತಿ

Ola, Uber, Rapido ಕಂಪನಿಗಳಿಗೆ ಆಟೋ ಸೇವೆಗಳನ್ನು ನೀಡಲು ಕರ್ನಾಟಕ ಹೈಕೋರ್ಟ್​ ಅನುಮತಿ ನೀಡಿದೆ.
ಇದರೊಂದಿಗೆ ಕರ್ನಾಟಕದಲ್ಲಿ ಈ ಮೂರು APP ಆಧಾರಿತ ಕಂಪನಿಗಳು ಈ ಹಿಂದಿನಂತೆ ಬೆಂಗಳೂರು ಒಳಗೊಂಡಂತೆ ವಿವಿಧ ಭಾಗಗಳಲ್ಲಿ ಆಟೋ ಸೇವೆಯನ್ನು ಮುಂದುವರೆಸಲಿವೆ.
10 ರೂಪಾಯಿ ಹೆಚ್ಚುವರಿ ಶುಲ್ಕ+ಜಿಎಸ್​ಟಿ:
ರಾಜ್ಯ ಸರ್ಕಾರ ಆಟೋಗಳಿಗೆ ವಿಧಿಸಿರುವ 30 ರೂಪಾಯಿ ಮೂಲದರದ  ಜೊತೆಗೆ 10 ರೂಪಾಯಿ ಹೆಚ್ಚುವರಿ ದರ ಹಾಗೂ ಜಿಎಸ್​ಟಿ ಒಳಗೊಂಡಂತೆ ಪ್ರಯಾಣ ಮೊತ್ತವನ್ನು ವಸೂಲಿ ಮಾಡಲು ಕಂಪನಿಗಳಿಗೆ ನ್ಯಾಯಮೂರ್ತಿ ಎಂಜಿಎಸ್​ ಕಮಲ್​ ಅವರ ಪೀಠ ಅನುಮತಿ ನೀಡಿದೆ.
ಆಟೋ ಸೇವೆ ನೀಡಬಾರದು ಎಂದು ಹೇಳಿ ಕರ್ನಾಟಕ ಸರ್ಕಾರ ವಿಧಿಸಿದ್ದ ನಿರ್ಬಂಧವನ್ನು ಪ್ರಶ್ನಿಸಿ ಕಂಪನಿಗಳು ಹೈಕೋರ್ಟ್​ ಮೆಟ್ಟಿಲೇರಿದ್ದವು. 15 ದಿನದೊಳಗೆ ಉತ್ತರ ನೀಡುವಂತೆ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್​ ಅಲ್ಲಿಯವರೆಗೂ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳದಂತೆ ಸೂಚಿಸಿದೆ.
ತನ್ನ ನಿರ್ಬಂಧವನ್ನು ಮೀರಿ ಆಟೋ ಸೇವೆ ಒದಗಿಸಿದರೆ ಪ್ರತಿ ಆಟೋಗೆ 5 ಸಾವಿರ ದಂಡ ವಸೂಲಿ ಮಾಡುವುದಾಗಿ ಕರ್ನಾಟಕ ಸರ್ಕಾರ ಕಂಪನಿಗಳಿಗೆ ಸೂಚಿಸಿತ್ತು. ಈ ಕ್ರಮಗಳನ್ನೆಲ್ಲ ಪ್ರಶ್ನಿಸಿ ಕಂಪನಿಗಳು ಹೈಕೋರ್ಟ್​ ಮೊರೆ ಹೋಗಿದ್ದವು.