ಸರ್ಕಾರಿ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗುವ ಖಾಸಗಿ ದೂರು ಸಲ್ಲಿಸಲು ಸಮಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಗದೇ ಇದ್ದರೆ ಅಂತಹ ದೂರುಗಳನ್ನು ಪರಿಗಣಿಸಬಾರದು ಎಂದು ಕೆಳ ಹಂತದ ನ್ಯಾಯಾಲಯಗಳಿಗೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಭ್ರಷ್ಟಾಚಾರ ಸಂಬಂಧ ತನಿಖೆ ನಡೆಸುವ ಆಧೀನ ನ್ಯಾಯಾಲಯಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸರ್ಕಾರಿ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗುವ ಖಾಸಗಿ ದೂರಿನ ತನಿಖೆಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17ಎ ಅಡಿಯಲ್ಲಿ ಸಮಕ್ಷಮ ಪ್ರಾಧಿಕಾರದಿಂದ ದೂರುದಾರರು ಅನುಮತಿ ಪಡೆದಿರಬೇಕು.
ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಕೆಗೂ ಮೊದಲು ದೂರುದಾರರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಪ್ರಯತ್ನಿಸಿದ್ದರು ಮತ್ತು ಆದರೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಬಗ್ಗೆ ದೂರುದಾರರು ತನಿಖೆಗೆ ಆದೇಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಾಗ ದಾಖಲೆಗಳನ್ನು ಸಲ್ಲಿಸಕಬೇಕು ಎಂದು ಹೈಕೋರ್ಟ್ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ.
ಈ ಮೂರು ಅಂಶಗಳನ್ನು ಆಧರಿಸಿಯಷ್ಟೇ ಭ್ರಷ್ಟಾಚಾರ ವಿರುದ್ಧ ತನಿಖೆ ನಡೆಸುವ ವಿಶೇಷ ನ್ಯಾಯಾಲಯಗಳು ಖಾಸಗಿ ದೂರನ್ನು ಮಾನ್ಯ ಮಾಡಬಹುದು ಎಂದು ಹೈಕೋರ್ಟ್ ಹೇಳಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17ಎ ಅಡಿಯಲ್ಲಿ ಸಮಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಸರ್ಕಾರಿ ಅಧಿಕಾರಿ ವಿರುದ್ಧ ಪೊಲೀಸ್ ಅಧಿಕಾರಿ ವಿಚಾರಣೆ ಅಥವಾ ತನಿಖೆ ನಡೆಸುವಂತಿಲ್ಲ.
ತಮ್ಮ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಆಧರಿಸಿ ತನಿಖೆಗೆ ಆದೇಶ ನೀಡಿದ್ದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಅಶೋಕ್ ವಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿ ಪುರಸ್ಕರಿಸಿದ ಹೈಕೋರ್ಟ್ ವಿಶೇಷ ನ್ಯಾಯಾಲದ ಆದೇಶವನ್ನು ವಜಾಗೊಳಿಸಿ ಖಾಸಗಿ ದೂರು ಮಾನ್ಯ ಮಾಡಲು ಮೂರು ಅಂಶಗಳನ್ನು ಪರಿಗಣಿಸುವಂತೆ ಸೂಚಿಸಿ ಮಾರ್ಗಸೂಚಿ ಹೊರಡಿಸಿದೆ.
ADVERTISEMENT
ADVERTISEMENT