ಜೆಡಿಎಸ್ ವರಿಷ್ಠ, ರಾಜಕೀಯ ಮುತ್ಸದಿ, ಮಾಜಿ ಪ್ರಧಾನಿಗಳಾದ ದೇವೇಗೌಡರ ಅಳಿಯ ಬಿಜೆಪಿ ಸೇರಿಕೊಂಡಿದ್ದಾರೆ.
ತಮ್ಮ ಮಾವನವರೇ ಕಟ್ಟಿದ ಪಕ್ಷದ ಶಾಲನ್ನು ಧರಿಸಿ ಲೋಕಸಭಾ ಚುನಾವಣಾ ಅಖಾಡದಲ್ಲಿ ಧುಮುಕ ಬೇಕಿದ್ದ ಡಾ ಸಿ ಎನ್ ಮಂಜುನಾಥ್ ಅವರು ಮನೆ ಮದ್ದಿಗಿಂತ ಬೇರೆ ಮನೆಯ ಮದ್ದೇ ಒಳಿತು ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ.
ಬಿಜೆಪಿ ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಿ ಎನ್ ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ.
ಡಾ ಸಿ ಎನ್ ಮಂಜುನಾಥ್ ಅವರ ಬಿಜೆಪಿ ಸೇರ್ಪಡೆಗೆ ದೇವೇಗೌಡರ ವಿರೋಧ ಇತ್ತು ಎನ್ನುವುದು ಮಾಹಿತಿ. ಆದರೆ ಈ ಮಾಹಿತಿಯನ್ನು ನಂಬಬೇಕಾದ ಅಗತ್ಯವೇನಿಲ್ಲ.
2006ರಲ್ಲಿ ಧರಂ ಸಿಂಗ್ ಸಿಎಂ ಆಗಿದ್ದಾಗ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಕೆಡವಿ BJP ಜೊತೆಗೆ ಹೋಗಿದ್ದಾಗ ಆಗ ದೇವೇಗೌಡರ ಆರೋಗ್ಯದ ಮೇಲೂ ಪರಿಣಾಮ ಬಿದ್ದಿತ್ತು ಎಂದು ಪದೇ ಪದೇ ಕುಮಾರಸ್ವಾಮಿ ಮತ್ತು ದೇವೇಗೌಡರ ಅವಕಾಶ ಸಿಕ್ಕಾಗಲೆಲ್ಲ ಹೇಳಿದ್ದುಂಟು. ಆದರೆ ಈಗ ಅದೇ BJPಯ ಜೊತೆಗೆ ಕುಮಾರಸ್ವಾಮಿ ಅವರು ಸೇರಿಕೊಂಡಿದ್ದಾರೆ. ಹೀಗಾಗಿ 20 ವರ್ಷಗಳ ಹಿಂದಿನ ಆ ಹೇಳಿಕೆಗಳೆಲ್ಲವೂ ಕೇವಲ ಕಣ್ಣೀರು ಕಾರ್ಯಕ್ರಮದ ಭಾಗವಾಗಿತ್ತು ಎಂದು ಜನರು ಅರ್ಥ ಮಾಡಿಳ್ಳದಷ್ಟು ದಡ್ಡರೇನಲ್ಲ.
ಆದರೆ ಈಗ ದೇವೇಗೌಡರ ಮಗಳ ಪತಿಯೇ ಅಂದರೆ ದೇವೇಗೌಡರ ಸ್ವಂತ ಅಳಿಯನೇ ಬಿಜೆಪಿಯನ್ನು ಸೇರಿಕೊಳ್ಳುವ ಮೂಲಕ ದೇವೇಗೌಡರ ಮನೆಯಲ್ಲಿ ಈಗ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರೂ ಇರಲಿದ್ದಾರೆ.
ಆದರೆ ಜೆಡಿಎಸ್ನಂತಹ ಪ್ರಾದೇಶಿಕ ಪಕ್ಷವೊಂದು ಬಿಜೆಪಿ ಎದುರು ಶರಣಾಗಿರುವ ರೀತಿಯನ್ನು ನೋಡಿಯೇ ಅಚ್ಚರಿಯೇನಿಸುತ್ತಿದೆ.
ದೇವೇಗೌಡರು ಮುಖ್ಯಮಂತ್ರಿಯಾಗಿ ಪ್ರತಿನಿಧಿಸಿದ್ದ, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಕರ್ಮಭೂಮಿಯನ್ನೇ ಜೆಡಿಎಸ್ ಬಿಜೆಪಿ ಬುಟ್ಟಿಗೆ ಹಾಕಿದ್ದು ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ನ ದಯನೀಯ ಸ್ಥಿತಿ ಸಾರ್ವಜನಿಕ ದರ್ಶನವಾಗುತ್ತಿದೆಯಷ್ಟೇ.
1994ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದೇ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಗೆಲ್ಲುವ ಮೂಲಕ. 1996ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗುವ ಮೂಲಕ ತಮ್ಮ ಚುನಾವಣಾ ರಾಜಕೀಯ ಆರಂಭಿಸಿದ್ದ ಕುಮಾರಸ್ವಾಮಿ 2006 ಮತ್ತು 2018ರಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆದಾಗ ರಾಮನಗರ ಮತ್ತು ಚನ್ನಪಟ್ಟಣದಿಂದ ಗೆದ್ದು ಬಂದಿದ್ದರು.
2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ರಾಮನಗರದ ಶಾಸಕಿಯಾಗಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಎಂಟರಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳು ರಾಮನಗರ ಜಿಲ್ಲೆಗೆ ಸೇರಿದವು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 1 ಕ್ಷೇತ್ರದಲ್ಲಷ್ಟೇ ಜೆಡಿಎಸ್ ಗೆದ್ದಿದೆ. ಆದರೆ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಮತ್ತು ಅದರಲ್ಲೂ ಡಾ ಸಿ ಎನ್ ಮಂಜುನಾಥ್ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ಖಾತ್ರಿ ಇತ್ತು ಎನ್ನುವುದಾದರೆ ಬೆಂಗಳೂರು ಗ್ರಾಮಾಂತರ ಟಿಕೆಟ್ಗಾಗಿ ಕುಮಾರಸ್ವಾಮಿ ಪಟ್ಟು ಹಿಡಿಯಬೇಕಿತ್ತು.
ತಮಗೆ ರಾಜಕೀಯ ನೆಲೆಯನ್ನು ಕೊಟ್ಟ ಬೆಂಗಳೂರು ಗ್ರಾಮಾಂತರವನ್ನು ಬಿಜೆಪಿ ಪಾದಕಮಲಕ್ಕೆ ದೇವೇಗೌಡರು ಮತ್ತು ಕುಮಾರಸ್ವಾಮಿ ಅರ್ಪಿಸಿದ್ದನ್ನು ನೋಡಿದರೆ ಜೆಡಿಎಸ್ನ ದಯನೀಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಷ್ಟೇ.