ADVERTISEMENT
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದಲೇ ಜೆಡಿಎಸ್ ಸಂಸ್ಥಾಪಕ, ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಅವರನ್ನು ಜೆಡಿಎಸ್ನಿಂದ ಉಚ್ಛಾಟಿಸಲ್ಪಿಟ್ಟಿರುವ ಸಿ ಎಂ ಇಬ್ರಾಹಿಂ ಅವರ ಬಣ ತೆಗೆದುಹಾಕಿದೆ. ಕೇರಳದ ಮಾಜಿ ಸಚಿವ ಸಿ ಕೆ ನಾಣು ಅವರು ಜೆಡಿಎಸ್ನ ಹೊಸ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಜೆಡಿಎಸ್ ವಿಭಜನೆಯತ್ತ ಮುಖ ಮಾಡಿದ್ದು, ಒಂದು ವೇಳೆ ಜೆಡಿಎಸ್ ಹೋಳಾದರೆ ಅದು ಜನತಾ ಪರಿವಾರದ ಮೂರನೇ ಹೋಳಾಗಲಿದೆ. ಜನತಾ ಪರಿವಾರ ಹೋಳಾಗಿ ಜೆಡಿಎಸ್ ಮತ್ತು ಜೆಡಿಯು ರಚನೆ ಆಯಿತು, ಈಗ ಜೆಡಿಎಸ್ ಕೂಡಾ ಹೋಳಾಗುತ್ತ ಸಾಗಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುದ್ದೆಗೂ ಕುತ್ತು..?
ಸಿ ಕೆ ನಾಣು ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್ನ ರಾಜ್ಯ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಅಧಿಕಾರವನ್ನು ನಾಣು ಹೊಂದಿದ್ದಾರೆ. ಅಂದರೆ ಕರ್ನಾಟಕದಲ್ಲಿ ಜೆಡಿಎಸ್ ಹಂಗಾಮಿ ರಾಜ್ಯಾಧ್ಯಕ್ಷ ಸ್ಥಾನದಿಂದ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಇಬ್ರಾಹಿಂ ಬಣ ತೆಗೆದುಹಾಕುವ ಸಾಧ್ಯತೆ ನಿಚ್ಚಳವಾಗಿದೆ. ಅಂದರೆ ಕರ್ನಾಟಕ ಜೆಡಿಎಸ್ ಘಟಕಕ್ಕೆ ಹೊಸ ರಾಜಾಧ್ಯಕ್ಷರು ಶೀಘ್ರವೇ ಬರಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಗಾದಿಗೂ ಕುತ್ತು..?
ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕವೂ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿಯೇ ಮುಂದುವರಿದಿದ್ದಾರೆ. ಜೆಡಿಎಸ್ ಕುಟುಂಬದ ಸ್ವತ್ತಲ್ಲ ಎಂದು ಈ ಹಿಂದೆ ಗುಡುಗಿದ್ದ ಇಬ್ರಾಹಿಂ ಅವರು ಕುಮಾರಸ್ವಾಮಿ ಮಗನನ್ನು ಯುವ ಘಟಕದ ಅಧ್ಯಕ್ಷ ಸ್ಥಾನದಿಂದ ಇಳಿಸಿ ಹೊಸ ಮುಖವನ್ನು ತಂದುಕೂರಿಸಿದರೂ ಅಚ್ಚರಿಯಿಲ್ಲ.
ಮೊದಲ ಹೆಜ್ಜೆ..?
ಬೆಂಗಳೂರಲ್ಲಿ ಇಬ್ರಾಹಿಂ ಅವರು ಜೆಡಿಎಸ್ನ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸುವುದಕ್ಕೂ ಎರಡು ದಿನ ಮೊದಲೇ ಬೆಂಗಳೂರಿನ ಜೆಡಿಎಸ್ ಮುಖ್ಯ ಕಚೇರಿ ಜೆಪಿ ಭವನದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸಿದ್ದ ಅಪ್ಪ-ಮಕ್ಕಳು ಇಬ್ರಾಹಿಂ ಮತ್ತು ನಾಣು ಇಬ್ಬರೂ ಪಕ್ಷದಿಂದ ಉಚ್ಛಾಟಿಸಿದ್ದರು. ಈ ಮೂಲಕ ಸೋಮವಾರ ಇಬ್ರಾಹಿಂ ನಡೆಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಪಕ್ಷದಲ್ಲ ಎಂಬ ಸಂದೇಶ ನೀಡುವ ಪ್ರಯತ್ನ ಮಾಡಿದ್ದರು.
ಅದೇ ರೀತಿ ಇಬ್ರಾಹಿಂ ಬಣದ ಈ ನಡೆಗೂ ಮೊದಲೇ ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಸಮಾಲೋಚಿಸಿ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಬಹುದು. ಆ ಮೂಲಕ ಇಬ್ರಾಹಿಂ ಬಣದ ನಡೆಗೆ ಚೆಕ್ಮೇಟ್ ನೀಡುವ ಪ್ರಯತ್ನವನ್ನು ಮಾಡಬಹುದು. ಆದರೆ ನಿಖಿಲ್ರನ್ನೂ ಇಬ್ರಾಹಿಂ ಬಣ ಇಳಿಸಿದರೆ ಆಗ ಹೋಗಬಹುದಾದ ಸಂದೇಶ ದೇವೇಗೌಡರ ಕುಟುಂಬಕ್ಕೆ ಮುಳುವಾಗಬಹುದು.
ಜೆಡಿಎಸ್ ಶಾಸಕರು ಎಲ್ಲಿ ಹೋಗ್ತಾರೆ..?
ಲೋಕಸಭಾ ಚುನಾವಣೆಯ ಬಳಿಕ ಸರ್ಕಾರವೇ ಇರಲ್ಲ ಎಂದು ಜನ ಚುನಾಯಿಸಿದ ಸರ್ಕಾರ ಬೀಳಿಸುವ ಹುನ್ನಾರದಲ್ಲಿರುವ ಕುಮಾರಸ್ವಾಮಿ ಅವರಿಗೆ ತಮ್ಮ ಪಕ್ಷದ ಶಾಸಕರು ಎಲ್ಲಿ ಹೋಗಬಹುದು ಎಂಬ ಆತಂಕ ಬಲವಾಗಿ ಕಾಡುತ್ತಿದೆ.
ಜೆಡಿಎಸ್ನ ಒಟ್ಟು 19 ಮಂದಿ ಶಾಸಕರ ಪೈಕಿ ಐವರು ಶಾಸಕರ ಬೆಂಬಲ ಇರುವುದಾಗಿಯೂ ಉಳಿದ 12 ಮಂದಿಯ ಬೆಂಬಲ ಸಿಕ್ಕ ಬಳಿಕ ಎಲ್ಲರ ಹೆಸರನ್ನೂ ಬಹಿರಂಗಪಡಿಸುವುದಾಗಿ ಇಬ್ರಾಹಿಂ ಹೇಳಿದ್ದಾರೆ. ಜೆಡಿಎಸ್ನ ಒಟ್ಟು 19 ಮಂದಿ ಶಾಸಕರಲ್ಲಿ ಒಂದೇ ಕುಟುಂಬದ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ಸಿ ಎನ್ ಬಾಲಕೃಷ್ಣರನ್ನು ಹೊರತುಪಡಿಸಿದರೆ ಆಗ ಉಳಿದವರು 16 ಮಂದಿ. ಇಬ್ರಾಹಿಂ ಈಗ ಕೊಡ್ತಿರುವುದು 17 ಮಂದಿಯ ಲೆಕ್ಕ. ಹಾಗಾದ್ರೆ ದೇವೇಗೌಡರ ಕುಟುಂಬದ ಒಬ್ಬ ಶಾಸಕ ಕೂಡಾ ಕುಮಾರಸ್ವಾಮಿ ನಡೆಯ ವಿರುದ್ಧ ನಿಲ್ಲುತ್ತಾರಾ..?
ಜೆಡಿಎಸ್ಗೆ ಹೊಸ ಚಿಹ್ನೆ..?
ನಾವೇ ನಿಜವಾದ ಜೆಡಿಎಸ್ ಎಂದಿರುವ ಇಬ್ರಾಹಿಂ ಭಾರತದ ಚುನಾವಣಾ ಆಯೋಗಕ್ಕೂ ದೂರು ನೀಡಬಹುದು. ನಮ್ಮ ಬಣಕ್ಕೆ ಹೊಸ ಚಿಹ್ನೆ ಕೊಡಿ ಎಂದು ಆಯೋಗಕ್ಕೆ ಹೇಳಲಿದೆ. ನ್ಯಾಯಾಲಯದಲ್ಲೂ ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ. ಹಾಗಾದರೆ ಜೆಡಿಎಸ್ ಎರಡು ಹೋಳಾಗಿ ಹೊಸ ಜೆಡಿಎಸ್ಗೆ ಹೊಸ ಚಿಹ್ನೆ ಸಿಗಬಹುದು.
ಇಂಡಿಯಾ ಮೈತ್ರಿಕೂಟದೊಳಗೆ ಜೆಡಿಎಸ್:
ಕಾಂಗ್ರೆಸ್ ಒಳಗೊಂಡ ಇಂಡಿಯಾ ಮೈತ್ರಿಕೂಟದೊಳಗೆ ಜೆಡಿಎಸ್ ಸೇರಲಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಆ ಶಕ್ತಿ ಪ್ರದರ್ಶನದಲ್ಲಿ ಇಂಡಿಯಾ ಮೈತ್ರಿಕೂಟದ ಅಖಿಲೇಶ್ ಯಾದವ್, ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮತ್ತು ರಾಹುಲ್ ಗಾಂಧಿ ಕೂಡಾ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಇಂಡಿಯಾ ಮೈತ್ರಿಕೂಟ ಸೇರುವ ಸಂಬಂಧ ರಾಜಸ್ಥಾನದ ಜೈಪುರದಲ್ಲಿ ಎಲ್ಲ ರಾಜ್ಯ ಘಟಕಗಳ ಸಭೆ ಕೂಡಾ ನಡೆಯಲಿದೆ.
ADVERTISEMENT