ADVERTISEMENT
ಹಣಕಾಸು ವ್ಯವಹಾರದಲ್ಲಿ ಗಲಾಟೆ ಹಿನ್ನೆಲೆಯಲ್ಲಿ ಆಪ್ತನಿಂದಲೇ ಜೈನ ಮುನಿ (Jain Monk) ಕಾಮಕುಮಾರ ನಂದಿ ಮಹಾರಾಜರ (Kamakumara Nandi Maharaja) ಕಗ್ಗೊಲೆ ಸಂಬಂಧ ದಾಖಲಾಗಿರುವ ಎಫ್ಐಆರ್ ಪ್ರತಿ ಪ್ರತಿಕ್ಷಣಕ್ಕೆ ಲಭ್ಯವಾಗಿದೆ.
ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ಪೊಲೀಸ್ ಠಾಣೆಯಲ್ಲಿ ಜುಲೈ 7ರಂದು ಪ್ರಕರಣ ದಾಖಲಾಗಿದೆ.
ಜೈನ ಮುನಿ ಕೊಲೆ ಪ್ರಕರಣದಲ್ಲಿ ಚಿಕ್ಕೋಡಿ ತಾಲೂಕಿನ ಮಾಳ ಕಟಕಬಾವಿ ನಿವಾಸಿಯಾಗಿರುವ ನಾರಾಯಣ ಬಸಪ್ಪ ಮಾಲಿ ಮೊದಲನೇ ಆರೋಪಿಯಾಗಿದ್ದಾನೆ. ಚಿಕ್ಕೋಡಿಯ ಸಂಜಯ್ ನಗರದ ನಿವಾಸಿಯಾಗಿರುವ ಹಸನ್ಸಾಬ್ ಮಕ್ಬುಲ್ ಡಲಾಯತ್ ಎರಡನೇ ಆರೋಪಿಯಾಗಿದ್ದಾನೆ.
ಜೈನ ಮುನಿಗಳ ಮೃತದೇಹಕ್ಕಾಗಿರುವ ಗಾಯದ ಸ್ವರೂಪವನ್ನು ಅತೀ ಭೀಕರ ಎಂದು ಪೊಲೀಸರು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಐಪಿಸಿ ಕಲಂ 201 ಮತ್ತು 302ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 201 ಸಾಕ್ಷ್ಯನಾಶಕ್ಕೆ ಸಂಬಂಧಿಸಿದ್ದು, ಐಪಿಸಿ 302 ಕೊಲೆಗೆ ಸಂಬಂಧಿಸಿದ್ದು ಈ ಕಲಂ ಅಡಿಯಲ್ಲಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.
ಎಫ್ಐಅರ್ನಲ್ಲಿ ಏನಿದೆ..?:
ಮೃತ ಆಚಾರ್ಯ ಶ್ರೀ 108 ಕಾಮಕುಮಾರ ನಂದಿಜಿ ಸ್ವಾಮೀಜಿ ವಯಸ್ಸು 58, ಜಾತಿ: ಜೈನ ದಿಗಂಬರ, ಸ್ಥಳ: ಹಿರೇಕೋಡಿ ನಂದಿ ಪರ್ವತ.
ಇವರು ಹಿರೇಕೋಡಿ ಗ್ರಾಮದಲ್ಲಿ ವೆಲ್ಪೇರ್ ಸೊಸೈಟಿ ನಡೆಸುತ್ತಿದ್ದು, ಸದರಿ ಸೊಸೈಟಿ ಸಮೀಪ ಆರೋಪಿ ನಂ1 ಇವನು ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬ ಸಮೇತ ವಾಸವಾಗಿದ್ದು, ಸ್ವಾಮೀಜಿ ಕೂಡಾ ಹಣಕಾಸು ವ್ಯವಹಾರವನ್ನು ಹೊಂದಿದ್ದು, ಸ್ವಾಮೀಜಿಯವರು ಆರೋಪಿ ನಂ.1(ನಾರಾಯಣ ಮಾಳಿ)ಗೆ ಹಣ ಮರಳಿಸುವಂತೆ ಪದೇ ಪದೇ ಕಿರಿಕಿರಿ ಮಾಡಿದ್ದರಿಂದ ಆರೋಪಿತನು ಕೋಪಗೊಂಡು ನಂ.2 (ಹಸನ್ ಡಲಾಯತ್) ಇವನ ಕೂಡ ಸಂಗನಮತ ಮಾಡಿಕೊಂಡು ಸ್ವಾಮೀಜಿಯವರಿಗೆ ಕೊಲೆ ಮಾಡುವ ಉದ್ದೇಶದಿಂದ ಸ್ವಾಮೀಜಿ ವಾಸಿರುವ ಕೊಠಡಿಯಲ್ಲಿ ಸ್ವಾಮೀಜಿಯವರಿಗೆ ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಪ್ರಯತ್ನಿಸಿ ವಿಫಲನಾಗಿ ಟಾವೇಲ್ನಿಂದ ಆರೋಪಿತರಿಬ್ಬರು ಕೂಡಿಕೊಂಡು ಸ್ವಾಮೀಜಿಯವರಿಗೆ ಕುತ್ತಿಗೆ ಬಿಗಿದು ಕೊಲೆ ಮಾಡಿ ಪುರಾವೆ ನಾಶ ಪಡಿಸುವ ಉದ್ದೇಶದಿಂದ ಮೃತದೇಹವನ್ನು ಒಂದು ಗೋಣಿ ಚೀಲದಲ್ಲಿ ಕಟ್ಟಿಕೊಂಡು ಆರೋಪಿ ನಂ.1 ಇವನ ಮೋಟಾರು ಸೈಕಲ್ ಮೇಲೆ ಹಾಕಿಕೊಂಡು ಕಟಕಬಾವಿ ಹತ್ತಿರ ಬಂದು ತೆರೆದ ಕೊಳವೆ ಬಾವಿ ಹತ್ತಿರ ಹೋಗಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಶವದ ತುಂಡುಗಳನ್ನು ಕೊಳವೆ ಬಾವಿಯಲ್ಲಿ ಎಸೆದು ತಮ್ಮ ರಕ್ತ ಸಿಕ್ತ ಬಟ್ಟೆಗಳನ್ನು ಮತ್ತು ಸ್ವಾಮೀಜಿಯವರ ಒಂದು ಡೈರಿಯನ್ನು ಸುಟ್ಟು ಪುರಾವೆ ನಾಶಪಡಿಸಿದ್ದಾರೆ.
ಹಣಕಾಸು ದ್ವೇಷವೇ ಕೊಲೆಗೆ ಕಾರಣ:
ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ನಾರಾಯಣ ಮಾಳಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಆಪ್ತ. ಈತ ಮುನಿಗಳ ಜೊತೆಗೆ 6 ವರ್ಷದಿಂದ ಒಡನಾಟಲದಲ್ಲೂ ಇದ್ದ. ಆದರೆ ಸಾಲವನ್ನು ವಾಪಸ್ ಕೊಡುವಂತೆ ಪದೇ ಪದೇ ಕೇಳಿದ್ದರಿಂದ ಕುಪಿತಗೊಂಡಿದ್ದ ನಾರಾಯಣ ಮಾಳಿ ಕೊಲೆಗೆ ಸಂಚು ರೂಪಿಸಿದ್ದ. ಆ ಕೊಲೆಗೆ ಹಸನ್ ಡಲಾಯತ್ ಸಹಾಯವನ್ನೂ ಪಡೆದ.
ಸಾಕ್ಷ್ಯನಾಶಕ್ಕಾಗಿ ದೇಹ ಕತ್ತರಿಸಿದ್ದ:
ಕೊಲೆಯ ಬಳಿಕ ಜೈನ ಮುನಿ ಮೃತದೇಹವನ್ನು ಆಶ್ರಮದ ಪಕ್ಕದಲ್ಲೇ ಇರುವ ಜಮೀನಿನಲ್ಲಿ ಗುಂಡಿ ತೆಗೆದು ಹೂಳುವ ಬಗ್ಗೆ ನಾರಾಯಣ ಮಾಳಿ ಯೋಚಿಸಿದ್ದ. ಆದರೆ ಮುನಿಗಳು ಕಾಣೆಯಾಗಿದ್ದಾರೆ ಎಂದು ಎಫ್ಐಆರ್ ಆಗಿದ್ದರಿಂದ ಒಂದು ವೇಳೆ ಗುಂಡಿ ಅಗೆದರೆ ಮೃತದೇಹ ಸಿಕ್ಕಿಬಿಡುತ್ತೆ ಎಂಬ ಕಾರಣದಿಂದ ದೇಹವನ್ನು ಕತ್ತರಿಸಿ ಖಾಲಿ ಬೋರ್ವೆಲ್ಗೆ ಎಸೆದರೆ ಮೃತದೇಹ ಸಿಗದೇ ಮುನಿಗಳು ನಾಪತ್ತೆಯಾಗಿದ್ದಾರೆ ಎಂದೇ ಜನ ಭಾವಿಸುತ್ತಾರೆ ಎಂದು ಯೋಚಿಸಿದ್ದ ನಾರಾಯಣ ಮಾಳಿ.
ADVERTISEMENT