ಬಿಗ್ ಬ್ರೇಕಿಂಗ್ – ನಾಲ್ವರು ಶಾಸಕರ ಖರೀದಿಗೆ 400 ಕೋಟಿ ಡೀಲ್???

ತೆಲಂಗಾಣ ರಾಜಕೀಯದಲ್ಲಿ ಅನಪೇಕ್ಷಿತ ಘಟನೆಯೊಂದು ನಡೆದಿದೆ. ಅತ್ಯಂತ ದುಬಾರಿಯಾದ  ಉಪ ಚುನಾವಣೆಯಾಗಿ ಸಂಚಲನ ಸೃಷ್ಟಿ ಮಾಡುತ್ತಿರುವ ಮುನುಗೋಡು ಹಂಗಾಮಾ ಒಂದು ಕಡೆ ನಡೆಯುತ್ತಿರುವ ಹೊತ್ತಲ್ಲಿಯೇ, ನಾಲ್ಕು ನೂರು ಕೋಟಿ ಬಳಸಿ ಅಧಿಕಾರ ಪಕ್ಷ ಟಿ ಆರ್ ಎಸ್ ಪಕ್ಷದ ನಾಲ್ವರು ಶಾಸಕರನ್ನು ಖರೀದಿ ಮಾಡುವ ಭಾರೀ ಡೀಲ್ ಗೆ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ. ಟಿ ಆರ್ ಎಸ್ ತೊರೆದು ಪಕ್ಷಾಂತರ ಮಾಡಿದಲ್ಲಿ ಒಬ್ಬೊಬ್ಬರಿಗೆ 100 ಕೋಟಿ ಕ್ಯಾಶ್ ಜೊತೆಗೆ ದೊಡ್ಡ ಮಟ್ಟದ ಗುತ್ತಿಗೆ ಕೊಡಿಸುವ ಅಮೀಷವೊಡ್ದುತ್ತಿದ್ದ ಆರೋಪದ ಮೇರೆಗೆ ಮೂವರನ್ನು ಮೊಯಿನಾಬಾದ್ ಸಮೀಪ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಟಿ ಆರ್ ಎಸ್ ಶಾಸಕರಾದ ತಾಂಡೂರಿನ ಪೈಲೆಟ್ ರೋಹಿತ್ ರೆಡ್ಡಿ, ಅಚ್ಚಮ್ ಪೇಟೆಯ ಗುವ್ವಲ ಗಂಗರಾಜು, ಕೊಲ್ಲಾಪುರದ ಬೀರಂ ಹರ್ಷವರ್ಧನ ರೆಡ್ಡಿ ಮತ್ತು ಪಿನಪಾಕದ ರೇಗಾ ಕಾಂತರಾವ್ ರನ್ನು ದೆಹಲಿ ಮೂಲದ ಕೆಲವರು ಸಂಪರ್ಕಿಸಿದ್ದರು. ನೀವು ಪಕ್ಷಾಂತರ ಮಾಡಿದಲ್ಲಿ ನಿಮಗೆ 100 ಕೋಟಿ ನಗದು ಜೊತೆಗೆ ದೊಡ್ಡ ದೊಡ್ಡ ಗುತ್ತಿಗೆ ಕೊಡಿಸ್ತೀವಿ ಎಂದು ಅಮೀಷ ಒಡ್ಡಿದ್ದರು. ಇದರಿಂದ ಅಲರ್ಟ್ ಆದ ಶಾಸಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ದೆಹಲಿ, ತಿರುಪತಿಯ ಇಬ್ಬರು ಸ್ವಾಮೀಜಿಗಳು ಸೇರಿ ಒಟ್ಟು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಡೀಲ್ ವೇಳೆ ದೆಹಲಿಯಲ್ಲಿರುವ ಬಿಜೆಪಿಯ ಪ್ರಮುಖ ನಾಯಕರೊಬ್ಬರ ಜೊತೆಗೆ ಫೋನ್ ನಲ್ಲಿ ನಾಲ್ವರು ಶಾಸಕರನ್ನು ಮಾತನಾಡಿಸಲು ಪ್ರಯತ್ನಿಸಿದ ಮಧ್ಯವರ್ತಿಗಳನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಶಾಸಕರ ಸಹಕಾರದಲ್ಲೇ ಆಪರೇಷನ್ ಮಾಡಿರುವ ಪೊಲೀಸರು, ಡೀಲ್ ಗೆ ಸಂಬಂಧಿಸಿದ ಒಂದೂವರೆ ಗಂಟೆಯಷ್ಟು ಆಡಿಯೋ, ವಿಡಿಯೋ ರೆಕಾರ್ಡಿಂಗ್ ಮಾಡಿ ಸಾಕಷ್ಟು ಆಧಾರಗಳೊಂದಿಗೆ ಮೂವರು ಡೀಲ್ ಮಾಸ್ಟರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡ ಮೊತ್ತದ ನಗದನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಪೊಲೀಸರ ವಶದಲ್ಲಿರುವ ಒಂದು ರಾಜಕೀಯ ಪಕ್ಷದ ದಲ್ಲಾಳಿಗಳನ್ನ ದೆಹಲಿಯ ಫರಿದಾಬಾದ್ ದೇವಾಲಯವೊಂದರ ಸ್ವಾಮೀಜಿ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ತಿರುಪತಿಯ ಮತ್ತೊಬ್ಬ ಸ್ವಾಮೀಜಿ ಸಿಂಹಯಾಜುಲು, ಹೈದರಾಬಾದ್ ನ ಡೆಕ್ಕನ್ ಪ್ರೈಡ್ ಹೋಟೆಲ್ ಮಾಲೀಕ ನಂದ ಕುಮಾರ್ ಎಂದು ತಿಳಿದುಬಂದಿದೆ. ಸದ್ಯ ಮೂವರನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಇದರ ಹಿಂದಿನ ಸೂತ್ರಧಾರರು ಯಾರು, ಇಷ್ಟೊಂದು ಹಣ ಹೇಗೆ ಹೊಂದಿಸಿದರು ಎಂಬ  ಬಗ್ಗೆ  ಬಾಯಿ ಬಿಡಿಸಲು ಪ್ರಯತ್ನ ನಡೆಸಿದ್ದಾರೆ.

ಡೀಲ್ ಮಾಸ್ಟರ್ ಗಳು ಅಮಿತ್ ಶಾ ಅವರೊಂದಿಗೆ ನೇರವಾಗಿ ಶಾಸಕರನ್ನು ಮಾತನಾಡಿಸಲು ನೋಡಿದರು ಎಂದು ಟಿ ಆರ್ ಎಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ಈ ಆರೋಪಗಳನ್ನು ಬಿಜೆಪಿ ತಳ್ಳಿ ಹಾಕುತ್ತಿದೆ. ಇದೆಲ್ಲ ಬಿಜೆಪಿ ಹೆಸರಿಗೆ ಕಳಂಕ ತರಲು ಕೆಸಿಆರ್ ಮಾಡ್ತಿರುವ ಮೆಗಾ ಡ್ರಾಮಾ ಎಂದು ಆರೋಪಿಸುತ್ತಿದೆ.

ಸದ್ಯ ನಾಲ್ವರು ಶಾಸಕರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ರನ್ನು ಭೇಟಿ ಮಾಡಿದ್ದು, ಇಂದು ಸುದ್ದಿಗೋಷ್ಠಿ ನಡೆಸಿ ಸ್ಪೋಟಕ ವಿಚಾರಗಳನ್ನು ಬಹಿರಂಗಪಡಿಸುವ ಸಂಭವ ಇದೆ.