ಹಿಜಾಬ್ ಧರಿಸುವ ಹಕ್ಕು ಶಾಲಾ ದ್ವಾರದ ಬಳಿಗೇ ಮುಗಿಯದು: ನ್ಯಾ. ಧುಲಿಯಾ

ಕರ್ನಾಟಕದ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ಭಿನ್ನ ತೀರ್ಪಿನಲ್ಲಿ ನ್ಯಾ.  ಧುಲಿಯಾ ಅವರು, ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್‌ ಧರಿಸುವ ಹಕ್ಕು ಶಾಲೆಯ ಗೇಟ್‌ ಬಳಿಗೇ ಸ್ಥಗಿತಗೊಳ್ಳುವುದಿಲ್ಲ. ಏಕೆಂದರೆ ಆಕೆಗೆ ತರಗತಿಯೊಳಗೂ ಗೌಪ್ಯತೆ ಮತ್ತು ಘನತೆಯ ಹಕ್ಕಿದೆ ಎಂದು ತಿಳಿಸಿದ್ದಾರೆ.

ಹೆಣ್ಣು ಮಗು ಹಿಜಾಬ್ ಧರಿಸಲು ಅನುಮತಿ ಕೋರುವುದು ಪ್ರಜಾಪ್ರಭುತ್ವದಲ್ಲಿ ಅತಿರೇಕದ ಸಂಗತಿಯಲ್ಲ ಎಂದು ನ್ಯಾ. ಧುಲಿಯಾ ಅಭಿಪ್ರಾಯಪಟ್ಟಿದ್ದಾರೆ.

ನ್ಯಾ. ಧುಲಿಯಾ ತೀರ್ಪಿನ ಪ್ರಮುಖಾಂಶಗಳು

# ಒಬ್ಬ ಹೆಣ್ಣು ಮಗಳಿಗೆ ತನ್ನ ಮನೆಯಲ್ಲಿ ಅಥವಾ ಮನೆಯ ಹೊರಗೆ ಹಿಜಾಬ್ ಧರಿಸುವ ಹಕ್ಕಿದ್ದು, ಆ ಹಕ್ಕು ತನ್ನ ಶಾಲೆಯ ಗೇಟ್‌ಗೆ ಸ್ಥಗಿತಗೊಳ್ಳುವುದಿಲ್ಲ. ಶಾಲೆಯ ಗೇಟ್‌ ಒಳಗೆ, ತನ್ನ ತರಗತಿಯಲ್ಲಿದ್ದಾಗಲೂ ಆಕೆಗೆ ಘನತೆ ಮತ್ತು ಗೌಪ್ಯತೆ ಕಾಯ್ದುಕೊಳ್ಳುವವರೆಗೆ ಅದು ಸಾಗುತ್ತದೆ.

# ಸಂವಿಧಾನ ಎಂಬುದು ಅಲ್ಪಸಂಖ್ಯಾತರು ಬಹುಸಂಖ್ಯಾತರ ಮೇಲೆ ಇಟ್ಟಿರುವ ನಂಬಿಕೆಯನ್ನು ಸೂಚಿಸುವ ದಾಖಲೆಯಾಗಿದೆ.

# ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬನ್ನು ಏಕೆ ನಿಷೇಧಿಸಬೇಕು ಎಂಬುದಕ್ಕೆ ಕರ್ನಾಟಕ ಹೈಕೋರ್ಟ್ ತೀರ್ಪು ಸಮರ್ಪಕವಾಗಿ ಉತ್ತರ ನೀಡುವುದಿಲ್ಲ.

# ಎಲ್ಲಾ ಅರ್ಜಿದಾರರು ಹಿಜಾಬ್‌ ಧರಿಸುವುದನ್ನೇ ಬಯಸುತ್ತಿದ್ದಾರೆ!  ಪ್ರಜಾಪ್ರಭುತ್ವದಲ್ಲಿ ಹೀಗೆ ಕೇಳುವುದು ಅತಿರೇಕದ ಸಂಗತಿಯೇ?

# ಹಿಜಾಬ್‌ ಧರಿಸುವುದು ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ, ನೈತಿಕತೆ ಅಥವಾ ಆರೋಗ್ಯಕ್ಕೆ ಹೇಗೆ ವಿರುದ್ಧ? ಈ ಪ್ರಶ್ನೆಗಳಿಗೆ ಕರ್ನಾಟಕ ಹೈಕೋರ್ಟ್‌ ಸೂಕ್ತ ಉತ್ತರ ನೀಡಿಲ್ಲ.

# ತರಗತಿಯಲ್ಲಿ ಹಿಜಾಬ್ ಧರಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗುತ್ತದೆ ಎಂಬ ವಾದದಲ್ಲಿ ಯಾವುದೇ ತರ್ಕವಿಲ್ಲ.

# ವ್ಯತಿರಿಕ್ತವಾಗಿ ವಿಭಿನ್ನತೆಯೊಂದಿಗೆ ಬದುಕುವುದು ಮತ್ತು ಹೊಂದಿಕೊಳ್ಳುವುದನ್ನು ಕಲಿಯುವುದು ಪ್ರಬುದ್ಧ ಸಮಾಜದ ಸಂಕೇತ.

# ಹೀಗಾಗಿ ಶಾಲೆಗಳಲ್ಲಿ ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿ ಸಹಿಷ್ಣುತೆ ಮತ್ತು ಹೊಂದಾಣಿಕೆಯ ಮೌಲ್ಯಗಳನ್ನು ಕಲಿಸಬೇಕು.

# ವಿಭಿನ್ನ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂವೇದನೆ, ಸಹಾನುಭೂತಿ ಮತ್ತು ಅರಿವು ಮೂಡಿಸಲು ಇದು ಸಕಾಲ. 

# ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ- 2020ರಲ್ಲಿ ಕೂಡ ಶಿಕ್ಷಣ ನೀಡುವಾಗ ಶಿಕ್ಷಣದಲ್ಲಿ ಸಹಿಷ್ಣುತೆ ಮತ್ತು ತಿಳುವಳಿಕೆಯ ಮೌಲ್ಯಗಳನ್ನು ಬೆಳೆಸುವ, ದೇಶದ ಶ್ರೀಮಂತ ವೈವಿಧ್ಯದ ಬಗ್ಗೆ ಅರಿವು ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದೆ.

# ಹಿಜಾಬ್‌ ನಿಷೇಧದಿಂದ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಉಂಟಾಗುತ್ತದೆ