10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯನ್ನು ಥಳಿಸಿ ಕಾಲು ನೆಕ್ಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.
ದುಷ್ಕರ್ಮಿಗಳು ದಲಿತ ವಿದ್ಯಾರ್ಥಿಗೆ ಹಿಂಸೆ ನೀಡಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ವೀಡಿಯೊ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಯ್ ಬರೇಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದುಷ್ಕರ್ಮಿಗಳ ಪತ್ತೆ ಮತ್ತು ಕ್ರಮ ಜರುಗಿಸಲು ಐದು ತಂಡಗಳನ್ನು ರಚಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿ ಬಾಲಕನಾಗಿದ್ದು, ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಉಳಿದ 6 ಮಂದಿ ಆರೋಪಿಗಳನ್ನು ಅಭಿಷೇಕ್, ವಿಕಾಸ್ ಪಾಸಿ, ಮಹೇಂದ್ರ ಕುಮಾರ್, ಹೃತಿಕ್ ಸಿಂಗ್, ಅಮನ್ ಸಿಂಗ್ ಮತ್ತು ಯಶ್ ಪ್ರತಾಪ್ ಎಂದು ಗುರುತಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ಶಾಲೆಯಲ್ಲಿ ಓದಿದ್ದ ಹಳೆ ವಿದ್ಯಾರ್ಥಿಗಳ ಸುಲಿಗೆಗೆ ಸಹಕರಿಸದ ಕಾರಣ 10ನೇ ತರಗತಿಯ ದಲಿತ ಬಾಲಕನಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.