ಗುಜರಾತ್ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್ ಮಾಜಿ ಶಾಸಕ ಇಂದ್ರನೀಲ್ ರಾಜ್ಗುರು ಅವರು ಗುರುವಾರ ರಾಜ್ಕೋಟ್ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ(ಎಎಪಿ) ಸೇರ್ಪಡೆಯಾದರು.
ಎಎಪಿ ಸೇರಿದ ಬಳಿಕ ಮಾತನಾಡಿದ ರಾಜ್ಗುರು ಅವರು, ಆಮ್ ಆದ್ಮಿ ಪಕ್ಷವು ಜನರ ಸೇವೆ ಸಲ್ಲಿಸಲು ಮತ್ತು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಬೇರುಸಹಿತ ಕಿತ್ತೊಗೆಯಲು ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ. ಅಲ್ಲದೆ ದೆಹಲಿ ಮುಖ್ಯಮಂತ್ರಿ ಜನರಿಗಾಗಿ ಹೋರಾಡುತ್ತಾರೆ. ಪಕ್ಷಕ್ಕಾಗಿ ಅಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಹಾಡಿ ಹೊಗಳಿದರು.
ಕೇಜ್ರಿವಾಲ್ ಅವರ ಹೋರಾಟ ನನ್ನನ್ನು ತುಂಬಾ ಪ್ರಭಾವಿಸಿತು. ಜನಸೇವೆ ಮಾಡಬೇಕೆಂಬ ಆಸೆಯಿಂದ ಮೊದಲಿನಿಂದಲೂ ಕಾಂಗ್ರೆಸ್ನಲ್ಲಿದ್ದೇನೆ. ಬಿಜೆಪಿ ಜನರನ್ನು ಮೂರ್ಖರನ್ನಾಗಿಸಿ ಅಧಿಕಾರ ಹಿಡಿದಿದೆ. ಆದರೆ ಕಾಂಗ್ರೆಸ್ ಗೆ ಪರ್ಯಾಯವಾಗುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಬಿಜೆಪಿಯನ್ನು ಸೋಲಿಸುವ ಇಚ್ಛಾಶಕ್ತಿಯ ಕೊರತೆಯೇ ಕಾಂಗ್ರೆಸ್ ತೊರೆಯಲು ಕಾರಣವಾಯಿತು ಎಂದು ಅವರು ಹೇಳಿದರು.
2012 ರಲ್ಲಿ ರಾಜ್ಕೋಟ್-ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ರಾಜ್ಗುರು ಅವರು 2017 ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸುರಕ್ಷಿತ ಕ್ಷೇತ್ರವನ್ನು ಬಿಟ್ಟು ರಾಜ್ಕೋಟ್-ಪಶ್ಚಿಮ ಕ್ಷೇತ್ರದಲ್ಲಿ ಆಗಿನ ಮುಖ್ಯಮಂತ್ರಿ ವಿಜಯ್ ರೂಪಾನಿ ವಿರುದ್ಧ ಸ್ಪರ್ಧಿಸಿ, ಸೋಲು ಅನುಭವಿಸಿದ್ದರು.