ನೆಲ್ಲಿಕಾಯಿಯು ಹಲವು ಪೋಷಕಾಂಶಗಳಿದ್ದು, ಅತ್ಯುತ್ತಮ ಆರೋಗ್ಯಕ್ಕೆ ಸಹಕರಿಸುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಾರ್ಬೋಹೈಡ್ರೇಟ್, ನಾರಿನಾಂಶ, ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಫಾಸ್ಫರಸ್, ನಿಕೋಟಿನಿಕ್ ಆಸಿಡ್ ಮತ್ತು ಕಬ್ಬಿಣ ಇತ್ಯಾದಿ ಪೋಷಕಾಂಶಗಳು ಇದ್ದು, ಇದರಿಂದ ರುಚಿಕರ ಚಟ್ನಿಯನ್ನು ಮಾಡಬಹುದಾಗಿದ.
ಹೌದು ನೆಲ್ಲಿಕಾಯಿ ಚಟ್ನಿಯು ರುಚಿಕರ ಮಾತ್ರವಲ್ಲ ಆರೋಗ್ಯಕರವೂ ಆಗಿದ್ದು, ಊಟದ ಜತೆಗೆ ನೆಲ್ಲಿಕಾಯಿ ಚಟ್ನಿ ಸವಿಯಲು ಬಯಸುವವರು ಪಟಾಪಟ್ ರೆಸಿಪಿ ತಯಾರಿಸಿಕೊಳ್ಳಬಹುದು.
ಬೇಕಾಗುವ ಪದಾರ್ಥಗಳು…
ಎಣ್ಣೆ- 3 ಚಮಚ
ಸಾಸಿವೆ- 1 ಚಮಚ
ಇಂಗು- ಚಿಟಿಕೆ
ಜೀರಿಗೆ- 1 ಚಮಚ
ಮೆಂತ್ಯೆ- ಕಾಲು ಚಮಚ
ಕಡಲೆಬೇಳೆ- 1 ಚಮಚ
ಉದ್ದಿನ ಬೇಳೆ- 1 ಚಮಚ
ಖಾರದ ಮೆಣಸಿನ ಕಾಯಿ- 5-6
ಹಸಿ ಮೆಣಸಿನ ಕಾಯಿ -3
ಕರಿಬೇವು- ಸ್ವಲ್ಪ
ನೆಲ್ಲಿಕಾಯಿ- ಕಾಲು ಕೆಜಿ
ಉಪ್ಪು- ರುಚಿಗೆ ತಕ್ಕಷ್ಟು
ಅರಿಶಿಣದ ಪುಡಿ- ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಬೆಲ್ಲ- ಸ್ವಲ್ಪ
ಮಾಡುವ ವಿಧಾನ…
ಮೊದಲಿಗೆ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಕಾದ ನಂತರ ಸಾಸಿವೆ ಹಾಕಿ. ಇದು ಕೆಂಪಗಾದ ಬಳಿಕ ಜೀರಿಗೆ, ಮೆಂತ್ಯೆ, ಇಂಗು, ಕಡಲೆಬೇಳೆ, ಉದ್ದಿನ ಬೇಳೆ ಹಾಕಿ ಕೆಂಪಗೆ ಹುರಿದುಕೊಳ್ಳಿ.
ನಂತರ ಖಾರದ ಮೆಣಸಿನ ಕಾಯಿ, ಹಸಿ ಮೆಣಸಿನ ಕಾಯಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಚೆನ್ನಾಗಿ ತೊಳೆದು, ಬೀಜ ತೆಗೆದು ಕತ್ತರಿಸಿಕೊಂಡ ನೆಲ್ಲಿಕಾಯಿ, ಉಪ್ಪು, ಅರಿಶಿಣದ ಪುಡಿ ಹಾಕಿ 8-10 ನಿಮಿಷ ಸಣ್ಣ ಉರಿಯಲ್ಲಿ ನೆಲ್ಲಿಕಾಯಿ ಬೇಯಲು ಬಿಡಿ. ಆಗಾಗೆ ಕೈಯಾಡಿಸುತ್ತಿರಿ.
ನಂತರ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ಹುರಿದ ಮಿಶ್ರಣವನ್ನು ಮಿಕ್ಸಿ ಜಾರ್’ಗೆ ಹಾಕಿ, ನಂತರ ಸ್ವಲ್ಪ ಬೆಲ್ಲವನ್ನೂ ಸೇರಿಸಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಂಡರೆ ರುಚಿಕರವಾದ ಬೆಟ್ಟದ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ಧ.