ಕೆಜಿಎಫ್ 1 ಹಾಗೂ ಕೆಜಿಎಫ್ 2 ಅತ್ಯದ್ಭುತ ಯಶಸ್ಸು ಗಳಿಸಿವೆ. ಕೆಜಿಎಫ್ 2 ಚಿತ್ರ ಈಗಾಗಲೇ 1 ಸಾವಿರ ಕೋಟಿ ರೂ. ಗಳಿಕೆ ಕಂಡು ಮುನ್ನುಗ್ಗುತ್ತಿರುವ ಹೊತ್ತಲ್ಲೇ, ನಿರ್ಮಾಪಕ ವಿಜಯ್ ಕಿರಗಂದೂರು ಕೆಜಿಎಫ್-3 ಚಿತ್ರ ನಿರ್ಮಾಣದ ಬಗ್ಗೆ ಮಾತನಾಡಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಅವರು, ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಚಿತ್ರ ನಿರ್ಮಾಣದಲ್ಲಿ ನಿರತರಾಗಿದ್ದಾರೆ. ಶೇ. 35ರಷ್ಟು ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಮುಂದಿನ ಶೆಡ್ಯೂಲ್ ಮುಂದಿನ ವಾರ ಆರಂಭವಾಗಲಿದೆ. ಸಲಾರ್ ಚಿತ್ರ ಅಕ್ಟೋಬರ್/ನವೆಂಬರ್ ನಲ್ಲಿ ಮುಕ್ತಾಯವಾಗಬಹುದು. ಅನಂತರ ನಾವು ಕೆಜಿಎಫ್-3 ಚಿತ್ರದ ಕೆಲಸ ಆರಂಭ ಮಾಡಲಿದ್ದೇವೆ. 2024 ರಲ್ಲಿ ಈ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕೆಜಿಎಫ್-2 ಚಿತ್ರ ಬಿಡುಗಡೆಯಾಗಿ ಈಗಾಗಲೇ ಸಾವಿರ ಕೋಟಿ ಗಳಿಕೆಯನ್ನು ದಾಟಿ ಮುನ್ನುಗ್ಗುತ್ತಿದೆ. ಈ ಚಿತ್ರದ ಬಿಡುಗಡೆಯಾದ ದಿನವೇ ಬಹುತೇಕ ಪ್ರೇಕ್ಷಕರವು ಕೆಜಿಎಫ್-3 ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದರು.
ಕೆಜಿಎಫ್-3 ಚಿತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಯಶ್ ಅವರು ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ನಿರ್ಮಾಪಕ ವಿಜಯ್ ಕಿರಗಂದೂರು ಈ ಬಗ್ಗೆ ಮೊದಲ ಬಾರಿ ಹೇಳಿಕೆ ನೀಡಿದ್ದು, ಪ್ರೇಕ್ಷಕರ ಕುತೂಹಲಕ್ಕೆ ಮತ್ತಷ್ಟು ಹೆಚ್ಚುವಂತಾಗಿದೆ.