ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪಡಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಅಭ್ಯರ್ಥಿಯೂ ಆಗಿರುವ ತೇಜಸ್ವಿಸೂರ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಭಾರತೀಯ ದಂಡ ಸಂಹಿತೆ ಕಲಂ 153 (ಎ) (ಧರ್ಮ ಮತ್ತು ಪಂಗಡಗಳ ನಡುವೆ ದ್ವೇಷ ಹರಡುವುದು), 295(ಎ) (ಬೇರೆಯವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಮತ್ತು ಜನಪ್ರತಿನಿಧಿ ಕಾಯ್ದೆಯ 123 (3ಎ) (ಅಭ್ಯರ್ಥಿ ಅಥವಾ ಆತನ ಏಜೆಂಟ್ನಿಂದ ದ್ವೇಷಕ್ಕೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಆ ದೂರು ಆಧರಿಸಿ ಚುನಾವಣಾಧಿಕಾರಿಗಳು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ನಗರ್ತ್ಪೇಟೆಯಲ್ಲಿ ಉತ್ತರ ಭಾರತ ಮೂಲದ ವ್ಯಾಪಾರಿ ಮುಖೇಶ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಗುಂಪೊಂದು ಹಲ್ಲೆ ಮಾಡಿತ್ತು. ಆ ಘಟನೆಯನ್ನು ಮುಂದಿಟ್ಟುಕೊಂಡು ತೇಜಸ್ವಿಸೂರ್ಯ ಪ್ರಚೋದನಕಾರಿ ಭಾಷಣ ಮತ್ತು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಹಾಕಿದ್ದರು.